ಬೆಂಗಳೂರು: ಜಗತ್ತಿನ ಯಾವುದೇ ಕ್ರೀಡೆಯ ಪ್ರೀಮಿಯರ್ ಲೀಗ್ ತಂಡವನ್ನು ಗಮನಿಸಿದಾಗ ಅ ತಂಡದ ನೆಲೆಯ ಒಬ್ಬ ಆಟಗಾರನಾದರೂ ಇದ್ದೇ ಇರುತ್ತಾನೆ. ಸ್ಥಳೀಯ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಫ್ರಾಂಚೈಸಿ ಮಾಲೀಕರು ಹೀಗೊಂದು ಅವಕಾಶ ಕಲ್ಪಿಸುತ್ತಾರೆ. ಆದರೆ, ಕನ್ನಡಿಗರ ನೆಚ್ಚಿನ ತಂಡವಾರ ಆರ್ಸಿಬಿ ಇದಕ್ಕೆ ತದ್ವಿರುದ್ಧ. ಪ್ರತಿ ಐಪಿಎಲ್ ಹರಾಜಿನ(ipl 2025 mega auction) ಆರಂಭದ ಸಂದರ್ಭದಲ್ಲಿ ಆರ್ಸಿಬಿ(RCB) ಕ್ರೇಜ್ ಹುಟ್ಟಿಸುತ್ತದೆ. ದುರಾದೃಷ್ಟವಶಾತ್ ಈ ಕ್ರೇಜ್ ಬಹುಕಾಲ ಉಳಿಯುವುದಿಲ್ಲ. ಸ್ಥಳೀಯ ಆಟಗಾರರನ್ನು ಬಿಟ್ಟು ವಿದೇಶಿ ಆಟಗಾರರು ಮತ್ತು ಬೇರೆ ರಾಜ್ಯದ ಕಳಪೆ ಪ್ರದರ್ಶನ ತೋರುವ ಆಟಗಾರರಿಗೆ ಭಾರೀ ಮೊತ್ತ ನೀಡಿ ಖರೀದಿ ಮಾಡುತ್ತದೆ. ಅಭಿಮಾನಿಗಳು ಈ ಬಗ್ಗೆ ಹಲವು ಬಾರಿ ಫ್ರಾಂಚೈಸಿ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರೂ ಫ್ರಾಂಚೈಸಿಯದ್ದು ಪ್ರತಿ ವರ್ಷ ಅದೇ ರಾಗ ಅದೇ ಹಾಡು. ಆದರೆ ಈ ಬಾರಿ ಹೀಗಾಗದು. ಕಾರಣ, ರಾಜ್ಯ ಸರ್ಕಾರವೇ ಮಧ್ಯಪ್ರವೇಶ ಮಾಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಹೌದು ಆರ್ಸಿಬಿಯಲ್ಲಿ ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಫ್ರಾಂಚೈಸಿ ಮೇಲೆ ರಾಜ್ಯ ಸರ್ಕಾರವೇ ಒತ್ತಡ ಹಾಕುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕದಲ್ಲಿ ಹಲವು ಪ್ರತಿಭಾನ್ವಿತ ಆಟಗಾರರಿದ್ದರೂ ಕೂಡ ಹರಾಜಿನ ವೇಳೆಯಲ್ಲಿ ಆರ್ಸಿಬಿ ಇವರನ್ನು ಖರೀದಿಸುವ ಪ್ರಯತ್ನವನ್ನೂ ನಡೆಸುವುದಿಲ್ಲ. ಒಂದೆರಡು ಆಟಗಾರರನ್ನು ಖರೀದಿಸಿದರೂ ಕೂಡ ಅವರನ್ನು ಬೆಂಚ್ಗೆ ಸೀಮಿತಗೊಳಿಸಲಾಗುತ್ತದೆ. ಈ ಬಾರಿ ಹರಾಜಿನಲ್ಲಿ ಸ್ಥಳೀಯ ಆಟಗಾರರಿಗೆ ಪ್ರಾಧಾನ್ಯತೆ ನೀಡುವಂತೆ ಫ್ರಾಂಚೈಸಿಯ ಮೇಲೆ ಸಾಕಷ್ಟು ಸರ್ಕಾರದ ಒತ್ತಡವಿದೆ ಎಂದು ತಿಳಿದುಬಂದಿದೆ. ʼಆರ್ಸಿಬಿ ಈ ಬಾರಿಯ ಮೆಗಾ ಹರಾಜಿನಲ್ಲಿ ಕರ್ನಾಟಕದ ಆಟಗಾರರತ್ತ ನೋಡಿದರೆ ಆಶ್ಚರ್ಯವೇನಿಲ್ಲ’ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಮೇಲೆ ಒತ್ತಡ ಹಾಕಿದ್ದು ಯಾರು?, ಯಾರ ಬಳಿ ಚರ್ಚೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ IPL 2025: ಆರ್ಸಿಬಿ ರಿಟೈನ್ ಪಟ್ಟಿ ಅಂತಿಮ; ಕೊಹ್ಲಿ ಮೊದಲ ಆಯ್ಕೆ
ಆರಂಭದಲ್ಲಿ ಮಹತ್ವ
ಐಪಿಎಲ್ ಆರಂಭಿಕ ಹಂತದಲ್ಲಿ ಕನ್ನಡಿಗ ಆಟಗಾರರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಹಾಗೂ ಕೆ.ಪಿ. ಅಪ್ಪಣ್ಣ, ಕೆ.ಎಲ್ ರಾಹುಲ್, ಸಿ.ಎಂ. ಗೌತಮ್, ಕುರುಣ್ ನಾಯರ್ ಹಾಗೂ ಶ್ರೀನಾಥ್ ಅರವಿಂದ್ ಮೊದಲಾದ ಕನ್ನಡ ನೆಲದ ಆಟಗಾರರು ಆರ್ಸಿಬಿ ತಂಡದಲ್ಲಿ ಆಡುತ್ತಿರುವಾಗ ಅದು ಬೆಂಗಳೂರಿನ ತಂಡವೆಂಬ ನಂಬಿಕೆ ಮೂಡಿಸಿತ್ತು. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಲದ ಹೀರೋಗಳ ಆಟ ನೋಡಲು ಆಗಮಿಸುತ್ತಿದ್ದರು. ಆದರೆ ಈಗ ಮನೆಯಂಗಣದಲ್ಲಿ ಮನೆಯ ಆಟಗಾರರು ಇಲ್ಲದ ತಂಡವಾಗಿ ಆರ್ಸಿಬಿ ಅಂಗಳದಲ್ಲಿ ಕಾಣಿಸಿಕೊಳ್ಳಲಿದೆ. ಕನ್ನಡ ಸಿನಿಮಾ ತಾರೆಯರು ಕೂಡ ನಮ್ಮ ತಂಡವೆಂದು ಆರ್ಸಿಬಿ ತಂಡಕ್ಕೆ ಬೆಂಬಲಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಫ್ರಾಂಚೈಸಿ ಖ್ಯಾತಿ ಗಳಿಸಿದ ಬಳಿಕ ತಂಡದಲ್ಲಿ ಕರ್ನಾಟಕದ ಒಬ್ಬ ಆಟಗಾರನಿಗೂ ಸ್ಥಾನ ಇಲ್ಲದಾಯಿತು.