ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಗೋ ಗ್ರೀನ್ ಅಭಿಯಾನದ ಮೂಲಕ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದೆ. ನಗರದ ಎರಡು ಕೆರೆಗಳಿಗೆ ಪುನಶ್ಚೇತನ ನೀಡಿ ಸ್ಥಳೀಯರಿಗೆ ಹಸ್ತಾಂತರಿಸಿದೆ. ಈ ಮೂಲಕ ಪರಿಸರ ಕಾಳಜಿ ಮೆರೆದಿದೆ. ಗೋ ಗ್ರೀನ್ ಯೋಜನೆಯಡಿ(Go Green Initiativ) ಬೆಂಗಳೂರಿನ ಇಟ್ಟಗಲ್ ಪುರ ಮತ್ತು ಸಂಡೇನಹಳ್ಳಿ ಕೆರೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದೆ. ಇಂಡಿಯಾ ಕೇರ್ಸ್ ಫೌಂಡೇಷನ್ ಮತ್ತು ಫ್ರೆಂಡ್ಸ್ ಆಫ್ ಲೇಕ್ಸ್ ಜೊತೆಗೂಡಿ ಆರ್‌ಸಿಬಿ ಈ ಕೆರೆಗಳನ್ನು ಅಭಿವೃದ್ದಿಪಡಿಸಿದೆ.
ಸ್ಥಳೀಯರ ನೀರಿನ ಸಮಸ್ಯೆ ಹಾಗೂ ನೀರಿನ ರಕ್ಷಣೆ ಉದ್ದೇಶದಿಂದ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಆರ್‌ಸಿಬಿ 2023ರಲ್ಲಿ ಕೈಗೆತ್ತಿಕೊಂಡಿತ್ತು. ಇದೀಗ ಯಶಸ್ವಿಯಾಗಿ ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಸ್ಥಳೀಯರಿಗೆ ನೀಡಲಾಗಿದೆ ಎಂದು ಆರ್‌ಸಿಬಿ ಉಪಾಧ್ಯಕ್ಷ ರಾಜೇಶ್ ಮೆನನ್ ತಿಳಿಸಿದ್ದಾರೆ.
2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.
ಇದನ್ನೂ ಓದಿ IND vs BAN 1st T20I: ಟೀಂ ಇಂಡಿಯಾಕ್ಕೆ ಬಿಗ್ ಶಾಕ್- ಟಿ20 ಪಂದ್ಯದಿಂದ ಶಿವಂ ದುಬೆ ಹೊರಕ್ಕೆ
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ತಂಡಗಳು ರಿಲೀಸ್ ಮತ್ತು ರೀಟೈನ್ ಲಿಸ್ಟ್ ಬಿಡುಗಡೆ ಮಾಡಲಿದ್ದಾರೆ. 6 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಜತೆಗೆ ಒಂದು ಆರ್‌ಟಿಎಂ ಬಳಕೆಗೂ ಅವಕಾಶವಿದೆ. ಇದುವರೆಗೂ ಕಪ್ ಗೆಲ್ಲದ ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಜಾಣ ನಡೆ ತೋರುವ ಮೂಲಕ ಸರಿಯಾದ ಆಟಗಾರರನ್ನು ಖರೀದಿ ಮಾಡಬೇಕು.
ಆರ್‌ಸಿಬಿ ಯೋಜನೆ ಏನು?
ವರದಿಗಳ ಪ್ರಕಾರ ಆರ್‌ಸಿಬಿ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ತಂಡಕ್ಕೆ ಖರೀದಿಸಲು ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ರಾಹುಲ್ ಕೂಡ ತವರು ತಂಡದ ಪರ ಆಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಭಿಮಾನಿಗಳು ಕೂಡ ರಾಹುಲ್ ಖರೀದಿಗೆ ಫ್ರಾಂಚೈಸಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡುತ್ತಲೇ ಇದ್ದಾರೆ. ಅಂತಿಮವಾಗಿ ಆರ್‌ಸಿಬಿಗೆ ಯಾರು ಸೇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹರಾಜಿನ ಬಳಿಕವೇ ಸಿಗಲಿದೆ.