Friday, 22nd November 2024

ದಾಖಲೆಗಳ ಮೇಲೆ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್

ಬೆಂಗಳೂರು: ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ.

ಶ್ರೀಲಂಕಾ ವಿರುದ್ಧ ಮುಕ್ತಾಯಗೊಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್‌ ಬರೋಬ್ಬರಿ 12 ವಿಕೆಟ್‌ ಕಬಳಿಸಿದ್ದರು.

ಭಾರತದ ಪರ ಅತಿ ಹೆಚ್ಚು ವಿಕೆಟ್‌ ಗಳನ್ನು ಪಡೆದ ಬೌಲರ್‌ ಗಳ ಪಟ್ಟಿಯಲ್ಲಿ ಕಪಿಲ್‌ ದೇವ್‌ ದಾಖಲೆಯನ್ನು ಮುರಿದು ಎರಡನೇ ಸ್ಥಾನಕ್ಕೆ ಜಿಗಿದಿದ್ದರು. ನಂತರವೂ ಪರಾಕ್ರಮ ಮುಂದುವರೆಸಿರುವ ಅಶ್ವಿನ್‌ ತಮ್ಮ ವಿಕೆಟ್‌ ಗಳಿಕೆ ಯನ್ನು 442 ವಿಕೆಟ್‌ಗಳಿಗೆ ಹೆಚ್ಚಿಸಿಕೊಳ್ಳುವ ಮೂಲಕ ಸ್ಟೇನ್‌ ದಾಖಲೆ ಮುರಿದು ಒಟ್ಟಾರೆ ಅತಿಹೆಚ್ಚು ವಿಕೆಟ್‌ ಸಾಧಕರ ಪಟ್ಟಿಯಲ್ಲಿ ಎಂಟನೇ ಸ್ಥಾನ ತಲುಪಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿಯೂ ಅಶ್ವಿನ್‌ ಹೊಸತೊಂದು ಮೈಲುಗಲ್ಲು ತಲುಪಿದ್ದಾರೆ. 100 ವಿಕೆಟ್ ಪೂರೈಸಿದ ವಿಶ್ವದ ಮೊದಲ ಬೌಲರ್ ಹಾಗೂ ಅತಿ ಹೆಚ್ಚಿನ ವಿಕೆಟ್‌ ಗಳಿಸಿದ ಸರದಾರ ಎಂಬ ಹೆಗ್ಗಳಿಕೆಗೆ ಅಶ್ವಿನ್‌ ಪಾತ್ರರಾಗಿದ್ದಾರೆ. ಅಶ್ವಿನ್ ನಂತರ, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಕಮ್ಮಿನ್ಸ್ ಇದುವರೆಗೆ ಡಬ್ಲ್ಯುಟಿಸಿಯಲ್ಲಿ 93 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ 83 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ 80 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 74 ವಿಕೆಟ್‌ಗಳೊಂದಿಗೆ ಐದನೇ ಮತ್ತು ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 6 ನೇ ಸ್ಥಾನದಲ್ಲಿದ್ದಾರೆ. ಭಾರತ ಪರ ಟೆಸ್ಟ್ ಸರಣಿಯಲ್ಲಿ ಅಶ್ವಿನ್ 12 ವಿಕೆಟ್ ಪಡೆದಿದ್ದು ಇದು 12ನೇ ಬಾರಿ. ತವರು ನೆಲದಲ್ಲಿ ಭಾರತ ಪರವಾಗಿ ಇದು ವರೆಗೆ 18 ಟೆಸ್ಟ್ ಸರಣಿ ಗಳನ್ನು ಆಡಿದ್ದಾರೆ.