ಬೆಂಗಳೂರು: 2022ರಲ್ಲಿ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿ ಮತ್ತೆ ಕ್ರಿಕೆಟ್ ಆಡುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್(Rishabh Pant Birthday) 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮ ದಿನಕ್ಕೆ ಬಿಸಿಸಿಐ ಸೇರಿ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. ಇತ್ತೀಚೆಗಷ್ಟೇ ಪಂತ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸಿ ಮಿಂಚಿದ್ದರು. ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 142 ಪಂದ್ಯಗಳನ್ನಾಡಿ 4512 ರನ್ ಗಳಿಸಿದ್ದಾರೆ. 7 ಶತಕಗಳು ಒಳಗೊಂಡಿದೆ.
ಡಿವೈಡರ್ಗೆ ಡಿಕ್ಕಿಯಾಗಿದ್ದ ಕಾರು
2022 ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸುಮಾರು 14 ತಿಂಗಳು ವಿಶ್ರಾಂತಿಯಲ್ಲಿದ್ದ ಪಂತ್ ಈ ವರ್ಷ ನಡೆದಿದ್ದ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಪುನರಾಗಮನ ಮಾಡಿದ್ದರು. ಬಳಿಕ ಟಿ20 ವಿಶ್ವಕಪ್ ಕಪ್ ಕೂಡ ಆಡಿದ್ದರು. ಸದ್ಯ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ.
ಪಂತ್ ಸ್ಮರಣೀಯ ಇನಿಂಗ್ಸ್
ರಿಷಭ್ ಪಂತ್ ಅವರು ಹಲವು ಟೆಸ್ಟ್ ಪಂದ್ಯಗಳಲ್ಲಿ ತಂಡ ಸಂಕಷ್ಟದಲ್ಲಿರುವಾಗ ಕೆಳ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿ ಅದೆಷ್ಟೋ ಬಾರಿ ಪಂದ್ಯ ಗೆಲ್ಲಿಸಿದ್ದು ಇದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಮೂರು ವರ್ಷಗಳ ಹಿಂದೆ ಗಬ್ಬಾ ಮೈದಾನದಲ್ಲಿ ಆಡಿದ್ದ ಇನಿಂಗ್ಸ್ ಯಾರೂ ಮರೆಯಲು ಸಾಧ್ಯವಿಲ್ಲ. 2021ರಲ್ಲಿ ಗಬ್ಬಾ ಅಂಗಳದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ 100 ಓವರ್‌ಗಳಲ್ಲಿ ಭಾರತ ಗೆಲುವಿಗೆ 328 ರನ್ ಗಳಿಸ ಬೇಕಿತ್ತು. ಅಂತಿಮ ದಿನ ಪಂದ್ಯ ಹೇಗೂ ತಿರುವು ಪಡೆಯಬಹುದಿತ್ತು. ಗೆದ್ದರೆ ಆಸ್ಟ್ರೇಲಿಯ ಗೆದ್ದೀತು, ಇಲ್ಲವೇ ಪಂದ್ಯ ಡ್ರಾ ಆದೀತು, ಆದರೆ ಭಾರತಕ್ಕೆ ಗೆಲುವು ಒಲಿಯುವುದು ಕಷ್ಟ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಅಲ್ಲದೇ ಬ್ರಿಸ್ಬೇನ್ ಅಂಗಳದ ಅಷ್ಟೂ ದಾಖಲೆಗಳು ಆಸ್ಟ್ರೇಲಿಯದ ಪರವಾಗಿದ್ದವು.
ಇದನ್ನೂ ಓದಿ Rishabh Pant: ನಾನು ಆರ್‌ಸಿಬಿ ಸೇರಲ್ಲ; ಸ್ಪಷ್ಟನೆ ಕೊಟ್ಟ ಪಂತ್
ಪಂಥಾಹ್ವಾನವನ್ನು ಸ್ವೀಕರಿಸಿ ಬಂದಿದ್ದ ರಿಷಭ್ ಪಂತ್ ಎಂದಿನ ಬಿರುಸಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತ ಸಾಗಿ ಕಾಂಗರೂಗಳಿಗೆ ಸೋಲಿನ ರುಚಿ ತೋರಿಸಿದ್ದರು. ಅಂತಿಮವಾಗಿ ಜೋಶ್ ಹ್ಯಾಝಲ್‌ವುಡ್ ಎಸೆತವನ್ನು ಲಾಂಗ್ ಆಫ್ ಬೌಂಡರಿಗೆ ಬಡಿದಟ್ಟುವುದರೊಂದಿಗೆ ನೂತನ ಇತಿಹಾಸವೊಂದು ನಿರ್ಮಾಣಗೊಂಡಿತ್ತು. 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಈ ಅನಿರೀಕ್ಷಿತ ಆಘಾತಕ್ಕೆ ತತ್ತರಿಸಿ ಬಿಕ್ಕಳಿಸಿತ್ತು.! 138 ಎಸೆತಗಳಿಂದ ಅಜೇಯ 89 ರನ್ (9 ಬೌಂಡರಿ, ಒಂದು ಸಿಕ್ಸರ್) ಬಾರಿಸಿದ ರಿಷಭ್ ಪಂತ್ ಈ ಗೆಲುವಿನ ನಿಜವಾದ ಹೀರೋ ಆಗಿ ಮೆರೆದಾಡಿದ್ದರು.