ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್(Rishabh Pant) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ವಿಕೆಟ್ ಹಿಂದೆ 150 ಪ್ಲಸ್ ಮಂದಿಯನ್ನು ಔಟ್ ಮಾಡಿದ ಮೂರನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು.
ಭಾನುವಾರದ ದ್ವಿತೀಯ ದಿನದಾಟದ ವೇಳೆ ಉಸ್ಮಾನ್ ಖ್ವಾಜಾ (21) ಕ್ಯಾಚ್ ಹಿಡಿಯುವುದರೊಂದಿಗೆ ರಿಷಭ್ ಪಂತ್ 150ನೇ ವಿಕೆಟ್ ಪಡೆದ ಸಾಧನೆ ಮಾಡಿದರು. ದಾಖಲೆ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಧೋನಿ 90 ಟೆಸ್ಟ್ ಪಂದ್ಯಗಳನ್ನಾಡಿ 294 ಔಟ್ ಮಾಡಿದ್ದಾರೆ. ಸೈಯ್ಯದ್ ಕಿರ್ಮಾನಿ. 1976 ರಿಂದ 1986 ರ ನಡುವೆ ಟೀಮ್ ಇಂಡಿಯಾ ಪರ 88 ಟೆಸ್ಟ್ ಪಂದ್ಯಗಳಲ್ಲಿ 151 ಇನಿಂಗ್ಸ್ ಆಡಿ 160 ಕ್ಯಾಚ್ ಹಾಗೂ 38 ಸ್ಟಂಪ್ಗಳೊಂದಿಗೆ ಒಟ್ಟು 198 ಬಲಿ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಪಂತ್ 41* ಟೆಸ್ಟ್ ಪಂದ್ಯದಿಂದ 152* ವಿಕೆಟ್ ಸಂಪಾದಿಸಿದ್ದಾರೆ.
ಇದನ್ನೂ ಓದಿ AUS vs IND: ಸ್ಮಿತ್-ಹೆಡ್ ಶತಕ ವೈಭವ; ಬೃಹತ್ ಮೊತ್ತ ಪೇರಿಸಿದ ಆಸೀಸ್
ಕಪಿಲ್ ದಾಖಲೆ ಮುರಿದ ಬುಮ್ರಾ
ಜಸ್‌ಪ್ರೀತ್ ಬುಮ್ರಾ 72 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತು ಮಿಂಚಿದರು. ಈ ವೇಳೆ ಅವರು ಮಾಜಿ ಆಟಗಾರ ಕಪಿಲ್ ದೇವ್ ಅವರ ದಾಖಲೆಯೊಂದನ್ನು ಮುರಿದರು. ವಿದೇಶಿ ನೆಲದಲ್ಲಿ ಆಡಿದ್ದ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತದ ವೇಗಿ ಎಂಬ ದಾಖಲೆಯನ್ನು ಬರೆದರು. ಇದಕ್ಕೂ ಮುನ್ನ ಈ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿತ್ತು. ಕಪಿಲ್ ದೇವ್ 10 ಬಾರಿ 5 ವಿಕೆಟ್ಗಳ ಗೊಂಚಲು ಪಡೆದಿದ್ದರು. ಇದೀಗ ಬುಮ್ರಾ 11ನೇ ಬಾರಿ 5 ವಿಕೆಟ್ ಕಬಳಿಸುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಇದು ಮಾತ್ರವಲ್ಲದೆ ಸೇನಾ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎಂಬ ದಾಖಲೆ ಕೂಡ ಬುಮ್ರಾ ಪಾಲಾಗಿದೆ. ಒಟ್ಟು 8 ಬಾರಿ 5 ವಿಕೆಟ್ ಕಬಳಿಸಿದ್ದಾರೆ.
ಬಿಗಿ ಹಿಡಿತ ಸಾಧಿಸಿದ ಆಸೀಸ್
ಟ್ರಾವಿಸ್ ಹೆಡ್(152 ) ಮತ್ತು ಸ್ವೀವನ್ ಸ್ಮಿತ್(101) ಬಾರಿಸಿದ ಅಮೋಘ ಶತಕದ ನೆರೆವಿನಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಕ್ಕಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 405 ರನ್ ಬಾರಿಸಿದೆ. ಸದ್ಯ ಅಲೆಕ್ಸ್ ಕ್ಯಾರಿ(45) ಮತ್ತು ಮಿಚೆಲ್ ಸ್ಟಾರ್ಕ್(7) ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.