ಚೆನ್ನೈ: ಬರೋಬ್ಬರಿ 20 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ ರಿಷಭ್ ಪಂತ್(Rishabh Pant) ಶತಕದ ಮೂಲಕ ಗ್ರೇಟ್ ಕಮ್‌ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದೇಶ(IND v BAN) ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪಂತ್ 109 ರನ್ ಬಾರಿಸಿದರು. ಇದು ಪಂತ್ ಅವರ 6ನೇ ಟೆಸ್ಟ್ ಶತಕವಾಗಿದೆ. ಇದೇ ವೇಳೆ ಅವರು ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿಯ(MS Dhoni) ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಪಂತ್ ಈ ಶತಕ ಬಾರಿಸುವ ಮೂಲಕ ವಿಕೆಟ್ ಕೀಪರ್ ಆಗಿ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಧೋನಿ ಕೂಡ 6 ಟೆಸ್ಟ್ ಶತಕ ಬಾರಿಸಿದ್ದಾರೆ. ಕಡಿಮೆ ಇನಿಂಗ್ಸ್‌ನಿಂದ ಈ ಸಾಧನೆಗೈದ ಲೆಕ್ಕಾಚಾರದಲ್ಲಿ ಪಂತ್‌ಗೆ ಅಗ್ರಸ್ಥಾನ. ಪಂತ್ 58 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದರೆ, ಧೋನಿ 144 ಇನಿಂಗ್ಸ್ ಆಡಿದ್ದರು.
ಶುಕ್ರವಾರದ ದಿನದಾಟಕ್ಕೆ 12ರನ್ ಗಳಿಸಿದ್ದ ಪಂತ್ ಶನಿವಾರ ಬಿರುಸಿನ ಬ್ಯಾಟಿಂಗ್ ಮೂಲಕ ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. ಶುಭಮನ್ ಗಿಲ್ ಜತೆ ಬ್ಯಾಟಿಂಗ್ ಪೈಪೋಟಿಗೆ ಇಳಿದ ಪಂತ್ ರನ್ ಗಳಿಕೆಯಲ್ಲಿ ತನಗಿಂತ ಮುಂದಿದ್ದ ಗಿಲ್ ಅವರನ್ನು ಹಿಂದಿಕ್ಕಿ ಶತಕ ಪೂರ್ತಿಗೊಳಿಸಿದರು. 72 ರನ್ ಗಳಿಸಿದ್ದ ವೇಳೆ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂತೋ ಅವರಿಂದ ಕ್ಯಾಚ್ ಕೈಚೆಲ್ಲಿ ಜೀವದಾನ ಪಡೆದ ಪಂತ್ ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು.
ಇದನ್ನೂ ಓದಿ Rishabh Pant: ಗಂಗೂಲಿ ಸಿಕ್ಸರ್ ದಾಖಲೆ ಮುರಿದ ಪಂತ್
128 ಎಸೆತ ಎದುರಿಸಿದ ಪಂತ್ 13 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 109 ರನ್ ಬಾರಿಸಿದರು. ಪಂತ್ ಔಟಾದ ಬಳಿಕ ಗಿಲ್ ಕೂಡ ಶತಕ ಬಾರಿಸಿದರು. ಈ ಮೂಲಕ ಒಂದೇ ಟೆಸ್ಟ್‌ನಲ್ಲಿ ಭಾರತ ಪರ ಒಟ್ಟು ಮೂರು ಶತಕ ದಾಖಲಾಯಿತು. ಮೊದಲ ಇನಿಂಗ್ಸ್‌ನಲ್ಲಿ ಆರ್. ಅಶ್ವಿನ್ ಶತಕ ಬಾರಿಸಿದ್ದರು.
ಗಂಗೂಲಿ ದಾಖಲೆ ಮುರಿದ ಪಂತ್
ರಿಷಭ್ ಪಂತ್(Rishabh Pant) 3 ಸಿಕ್ಸರ್ ಬಾರಿಸುವ ಮೂಲಕ ಮಾಜಿ ದಿಗ್ಗಜ ಆಟಗಾರ ಸೌರವ್ ಗಂಗೂಲಿ(Sourav Ganguly) ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರುವ ಮೂಲಕ ಗಂಗೂಲಿಯನ್ನು ಹಿಂದಿಕ್ಕಿದ್ದಾರೆ. ಗಂಗೂಲಿ 57 ಸಿಕ್ಸರ್ ಬಾರಿಸಿ ಏಳನೇ ಸ್ಥಾನಿಯಾಗಿದ್ದರು. ಇದೀಗ ಪಂತ್ 59 ಸಿಕ್ಸರ್ ಬಾರಿಸಿದ್ದಾರೆ.