ಕಾನ್ಪುರ: ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ(Green Park) ಆರಂಭಗೊಂಡ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 60 ವರ್ಷಗಳ ಬಳಿಕ ಈ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಮೊದಲ ಭಾರತೀಯ ನಾಯಕ ಎನಿಸಿಕೊಂಡರು.
ರೋಹಿತ್‌ಗೂ ಮುನ್ನ ಅಂದರೆ, 1964ರಲ್ಲಿ ಗ್ರೀನ್ ಪಾರ್ಕ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅಂದಿನ ಭಾರತ ತಂಡದ ನಾಯಕರಾಗಿದ್ದ ಮನ್ಸೂರ್ ಅಲಿಖಾನ್ ಪಟೌಡಿ ಅವರು ಟಾಸ್ ಗೆದ್ದು ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದ್ದರು. ಇದಾದ ಬಳಿಕ ಭಾರತ ಇಲ್ಲಿ ಹಲವು ನಾಯಕರ ಸಾರಥ್ಯದಲ್ಲಿ ಟೆಸ್ಟ್ ಪಂದ್ಯ ಆಡಿದ್ದರೂ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ದುಕೊಳ್ಳುತ್ತಿದ್ದರು. ಇದೀಗ ರೋಹಿತ್ ದೀರ್ಘ ಕಾಲದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಮೊದಲ ದಿನದಾಟಕ್ಕೆ ಮಳೆ ಅಡ್ಡಿ
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಟಾಸ್ ಪ್ರಕ್ರಿಯೆ ಕೂಡ ವಿಳಂಬಗೊಂಡಿತು. ತಡವಾಗಿ ಆರಂಭಗೊಂಡ ಪಂದ್ಯದಲ್ಲಿ 35 ಓವರ್ ಆಡಿ 3 ವಿಕೆಟ್ ನಷ್ಟಕ್ಕೆ 107ರನ್ ಗಳಿಸಿದೆ. ಈ ವೇಳೆ ಮಳೆ ಬಂದ ಕಾರಣ ಮೊದಲ ದಿನದಾಟವನ್ನು ಇಲ್ಲಿಗೆ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ IND vs BAN 2nd Test: ಕುಸಿಯುವ ಭೀತಿಯಲ್ಲಿ ಕಾನ್ಪುರ ಸ್ಟೇಡಿಯಂ; 50 ಮಂದಿ ಕುಳಿತರೂ ಅಪಾಯ!
ಸೆಹವಾಗ್ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್
ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿರುವ ರೋಹಿತ್ ಶರ್ಮ, ಬಾಂಗ್ಲಾದೇಶ(IND vs BAN) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತದ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ದಾಖಲೆ ಮಾಜಿ ಡ್ಯಾಶಿಂಗ್ ಆಟಗಾರ ವಿರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ 104 ಟೆಸ್ಟ್ ಪಂದ್ಯ ಆಡಿ 90 ಸಿಕ್ಸರ್ ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ರೋಹಿತ್ 59* ಪಂದ್ಯಗಳಿಂದ 84* ಸಿಕ್ಸರ್ ಬಾರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ 78 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.