Sunday, 24th November 2024

Rohit Sharma: ಸಹೋದರನ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ರೋಹಿತ್​

ಮುಂಬಯಿ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ(Rohit Sharma) ಅವರು ತಮ್ಮ ಸಹೋದರನ ಮದುವೆಯಲ್ಲಿ ಡ್ಯಾನ್ಸ್(rohit sharma dance)​ ಮಾಡಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈಯಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರೋಹಿತ್‌ ನೇರಳೆ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ಸಖತ್ ಸ್ಟೈಲೀಶ್ ಆಗಿ ಕಂಡಿದ್ದಾರೆ.

https://twitter.com/rushiii_12/status/1855632829809365441

2 ವರ್ಷಗಳ ಹಿಂದೆಯೂ ರೋಹಿತ್​ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಅವರ ಸಹೋದರನ ಮದುವೆಯಲ್ಲಿ ಪತ್ನಿ ಜತೆ ಮಸ್ತ್‌ ಡ್ಯಾನ್ಸ್​ ಮಾಡಿದ್ದರು. ಈ ವಿಡಿಯೊ ಕೂಡ ವೈರಲ್‌ ಆಗಿತ್ತು. ಅಲ್ಲದೆ ಹಿಟ್‌ಮ್ಯಾನ್‌ ಡ್ಯಾನ್ಸ್‌ಗೆ ಅಭಿಮಾನಿಳು ಫಿದಾ ಆಗಿದ್ದರು.

5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಭಾರತ ತಂಡ ಎರಡು ಬ್ಯಾಚ್‌ಗಳಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದೆ. ಆದರೆ ರೋಹಿತ್‌ ಪ್ರಯಾಣಿಸಿಲ್ಲ. ವೈಯಕ್ತಿಕ ಕಾರಣ ನೀಡಿರುವ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಸದ್ಯ ಅವರು ಆಡುವ ಅಥವಾ ಗೈರಾಗುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ರೋಹಿತ್‌ ಡ್ಯಾನ್ಸ್‌ ಮಾಡುತ್ತಿರುವ ಫೋಟೊ ಕಂಡ ಕೆಲ ನೆಟ್ಟಿಗರು ಪಂದ್ಯವನ್ನಾಡಲು ನಿಮಗೆ ಸಮಯವಿಲ್ಲ ಆದರೆ ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಸಮಯವಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

https://twitter.com/mufaddal_vohra/status/1636609627965259777

ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಆಡಿದ 6 ಇನಿಂಗ್ಸ್‌ನಲ್ಲಿ ಗಳಿಸಿದ್ದು ಕೇವಲ 91 ರನ್‌ ಮಾತ್ರ. ಇದರಲ್ಲಿ 52 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಸಾರಥ್ಯದಲ್ಲಿ ಸೋತರೆ ಸರಣಿ ಮುಕ್ತಾಯದ ಬಳಿಕ ನಾಯಕತ್ವ ಕೈ ತಪ್ಪಿ ಹೋದರೂ ಅಚ್ಚರಿಯಿಲ್ಲ. ರೋಹಿತ್‌ ನಾಯಕತ್ವದಿಂದ ಕೆಳಗಿಳಿದರೆ ಉಪನಾಯಕನಾಗಿರುವ ವೇಗಿ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ತಂಡದ ನೂತನ ನಾಯಕನಾಗಬಹುದು.

ಇದನ್ನೂ ಓದಿ IND vs SA: 5 ವಿಕೆಟ್‌ ಸಾಧನೆ ಮಾಡಿದ ವರುಣ್‌ ಚಕ್ರವರ್ತಿ ಬಗ್ಗೆ ಸೂರ್ಯಕುಮಾರ್‌ ಹೇಳಿದ್ದಿದು!

ಆಸೀಸ್‌ ತಂಡ ಪ್ರಕಟ

ನವೆಂಬರ್‌ 22ರಿಂದ ಆರಂಭವಾಗಲಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ(Border-Gavaskar Trophy) ಮೊದಲ ಟೆಸ್ಟ್‌ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಮೊದಲ ಪಂದ್ಯಕ್ಕಾಗಿ 13 ಆಟಗಾರರ ತಂಡ ಪ್ರಕಟಿಸಲಾಗಿದ್ದು(Australia SQUAD) ಅಚ್ಚರಿ ಎಂಬಂತೆ ವಿಕೆಟ್‌ ಕೀಪರ್‌ ಬ್ಯಾಟರ್‌ ಜೋಶ್‌ ಇಂಗ್ಲಿಸ್, ಮತ್ತು ಭಾರತ ಎ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ್ದ ನಾಥನ್ ಮೆಕ್‌ಸ್ವೀನಿಗೆ ಅವಕಾಶ ನೀಡಲಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್‌ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಟ್ರಾವಿಸ್‌ ಹೆಡ್‌, ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಮತ್ತು ಆಲ್‌ ರೌಂಡರ್‌ ಆಗಿ ಮಿಚೆಲ್‌ ಮಾರ್ಷ್‌ ಸ್ಥಾನ ಪಡೆದಿದ್ದಾರೆ. ವೇಗಿಗಳಾಗಿ ನಾಯಕ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಜಲ್‌ ವುಡ್‌ ಮತ್ತು ಸ್ಕಾಟ್‌ ಬೊಲ್ಯಾಂಡ್‌ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್‌ ನಾಥನ್‌ ಲಿಯಾನ್‌ ತಂಡದಲ್ಲಿದ್ದಾರೆ. ಈ ಹಿಂದಿನ ಎರಡು ತವರಿನ ಸರಣಿಯಲ್ಲಿ ಆಸ್ಟ್ರೇಲಿಯಾ ಹೀನಾಯವಾಗಿ ಸರಣಿ ಸೋಲು ಕಂಡಿತ್ತು. ಹೀಗಾಗಿ ಈ ಬಾರಿ ಗೆಲ್ಲಲೇ ಬೇಕೆಂಬ ಪಣ ತೊಟ್ಟಿದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಯಾನ್, ಮಿಚೆಲ್ ಮಾರ್ಶ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.