ನವದೆಹಲಿ: ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕನಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.
ರೋಹಿತ್ ಅವರು ಚೇತೇಶ್ವರ ಪೂಜಾರ ಸ್ಥಾನವನ್ನು ತುಂಬಲಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪೂಜಾರಗೆ ಉಪ ನಾಯಕನ ಜವಾಬ್ದಾರಿ ವಹಿಸಿಕೊಡಲಾಗಿತ್ತು.
ವಿರಾಟ್ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಬಳಿಕ ಸ್ವದೇಶಕ್ಕೆ ವಾಪಸಾಗಿದ್ದಾರೆ. ಹೀಗಾಗಿ ಎರಡನೇ ಪಂದ್ಯಕ್ಕೆ ಪೂಜಾರ ಅವರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿತ್ತು.
ಸಿಡ್ನಿ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಿರುವ ರೋಹಿತ್ ಕಳೆದ ಬುಧವಾರ ಮೆಲ್ಬೋರ್ನ್‌ನಲ್ಲಿ ಭಾರತ ತಂಡವನ್ನು ಸೇರಿಕೊಂಡರು.
ರೋಹಿತ್ ಗುರುವಾರದಿಂದ ನೆಟ್ ಅಭ್ಯಾಸ ಆರಂಭಿಸಿದ್ದಾರೆ. ಹೊಸ ವರ್ಷದ ವಿರಾಮದ ಬಳಿಕ ಶನಿವಾರದಿಂದ ಟೀಮ್ ಇಂಡಿಯಾ ಸರ್ವ ಸನ್ನದ್ಧವಾಗಿ ಅಭ್ಯಾಸ ಆರಂಭಿಸಲಿದೆ.
ಭಾರತೀಯ ಕ್ರಿಕೆಟ್ ತಂಡ ಜನವರಿ 7ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಹೊಸ ವರ್ಷದ ಟೆಸ್ಟ್ ಪಂದ್ಯವನ್ನು ಆಡಲು ಜನವರಿ 5ರಂದು ಸಿಡ್ನಿಗೆ ತೆರಳಲಿದೆ.