Sunday, 6th October 2024

ಟಿ20 ವಿಶ್ವಕಪ್‌ ಗೆಲುವಿನ ನಿಜವಾದ ರೂವಾರಿ ಯಾರೆಂದು ಬಹಿರಂಗಪಡಿಸಿದ ರೋಹಿತ್‌; ಸೂರ್ಯ ಅಲ್ಲ!

ಮುಂಬಯಿ: ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌(T20 world cup 2024) ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಮಣಿಸಿ 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ಪಂದ್ಯದ(T20 WC Final) ಅಂತಿಮ ಕ್ಷಣದಲ್ಲಿ ಸೂರ್ಯಕುಮಾರ್‌(Suryakumar Yadav) ಬೌಂಡರಿ ಲೈನ್‌ನಲ್ಲಿ ಅಸಾಮಾನ್ಯ ಕಾಚ್‌ ಹಿಡಿದು ಡೇವಿಡ್‌ ಮಿಲ್ಲರ್‌ ವಿಕೆಟ್‌ ಪತನಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಕ್ಯಾಚ್‌ನಿಂದ ಭಾರತ ಗೆಲುವು ಸಾಧಿಸಿತು ಎನ್ನುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ನಂಬಿಕೆ. ಆದರೆ, ಪಂದ್ಯದ ನಿಜವಾದ ಹೀರೋ ಯಾರೆಂಬ ಅಸಲಿ ಸತ್ಯವನ್ನು ನಾಯಕ ರೋಹಿತ್‌ ಶರ್ಮಾ(Rohit Sharma) ಬಿಚ್ಚಿಟ್ಟಿದ್ದಾರೆ.

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋದಲ್ಲಿ ಪಾಲ್ಗೊಂಡಿದ್ದ ರೋಹಿತ್‌ ಶರ್ಮ, ಟಿ20 ವಿಶ್ವಕಪ್‌ ಗೆಲುವಿನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ʼಎಲ್ಲರೂ ನಾವು ಸೂರ್ಯ ಹಿಡಿದ ಕ್ಯಾಚ್‌ನಿಂದ ಕಪ್‌ ಗೆದ್ದೆವು ಎಂಬು ಭಾವಿಸಿದ್ದಾರೆ. ಆದರೆ, ನಿಮಗೂ ತಿಳಿಯದ ವಿಚಾರ ಮತ್ತೊಂದಿದೆ. ಪಂದ್ಯ ಗೆಲ್ಲಲು ಪ್ರಮುಖ ಕಾರಣ ರಿಷಭ್‌ ಪಂತ್‌. ಅಂದು ಪಂತ್‌ ಆ ಉಪಾಯ ಮಾಡದಿದ್ದರೆ ನಾವು ಕಪ್‌ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಗೆಲುವಿನ ಶ್ರೇಯ ಅವರಿಗೆ ಸಲ್ಲುತ್ತದೆʼ ಎಂದು ರೋಹಿತ್‌ ಹೇಳಿದರು.

ಇದನ್ನೂ ಓದಿ IND vs BAN: ಮೊದಲ ಟಿ20ಗೆ ಭಾರತ ಆಡುವ ಬಳಗ ಹೇಗಿರಲಿದೆ?

ʼದಕ್ಷಿಣ ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ 26 ರನ್ ಅಗತ್ಯವಿತ್ತು. ಈ ವೇಳೆ ಸಣ್ಣ ವಿರಾಮ ಪಡೆಯಲಾಯಿತು. ವಿರಾಮದ ಬಳಿಕ ನಾನು ನಾನು ಫೀಲ್ಡ್‌ ಸೆಟ್‌ ಮಾಡುತ್ತಿದೆ. ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಂತಿದ್ದರು. ಆದರೆ ರಿಷಭ್‌ ಪಂತ್‌ ಏಕಾಏಕಿ ನೆಲಕ್ಕೆ ಬಿದ್ದಿದ್ದರು. ತಂಡದ ಫೀಜಿಯೋ ಬಂದು ಅವರಿಗೆ ಆರೈಕೆ ನೀಡುತ್ತಿದ್ದರು. ಪಂತ್‌ಗೆ ಏನಾಗಿದೆ ಎಂದು ನನಗೂ ತಿಳಿಯಲಿಲ್ಲ. ಏಕೆಂದರೆ ಸ್ವಲ್ಪ ಸಮಯಕ್ಕೂ ಮುನ್ನ ಆತ ಸರಿ ಇದ್ದ. ನಿಜವಾಗಿ ಪಂತ್‌ಗೆ ಏನೂ ಆಗಿರಲಿಲ್ಲ. ಆತ ಸುಮ್ಮನೆ ಗಾಯಗೊಂಡಂತೆ ನಾಟಕವಾಡಿ ಎದುರಾಳಿ ಬ್ಯಾಟರ್‌ಗಳ ಏಕಾಗ್ರತೆಯನ್ನು ತಪ್ಪಿಸಿದ. ಕ್ರೀಸ್‌ನಲ್ಲಿದ್ದ ಕ್ಲಾಸೆನ್‌ ಪಂದ್ಯ ಯಾವಾಗ ಆರಂಭಗೊಳ್ಳುತ್ತದೆ ಎಂದು ಕಾಯುತ್ತಿದ್ದರು. ಪಂತ್‌ ಸಮಯ ವ್ಯರ್ಥ ಮಾಡಿದ ಕಾರಣ ಕ್ಲಾಸೆನ್‌ ಬ್ಯಾಟಿಂಗ್‌ ಮುಂದುವರಿಸಿದಾಗ ವಿಚಲಿತರಾಗಿ ವಿಕೆಟ್‌ ಕಳೆದುಕೊಂಡರು. ಕೈ ಜಾರಿ ಹೋಗಿದ್ದ ಪಂದ್ಯ ಮತ್ತೆ ನಮ್ಮ ಹಿಡಿತಕ್ಕೆ ಬಂತು. ಪಂತ್‌ ಅವರ ಈ ಉಪಾಯ ನಿಜಕ್ಕೂ ನಮ್ಮ ಗೆಲುವಿಗೆ ಕಾರಣʼ ಎಂದು ರೋಹಿತ್‌ ಅಂದಿನ ಘಟನೆಯನ್ನು ಬಹಿರಂಗಪಡಿಸಿದರು.