Thursday, 12th December 2024

Rohit Sharma: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಬೆಂಗಳೂರು ಅಭಿಮಾನಿಗಳ ಮನವಿ

ಬೆಂಗಳೂರು: ನ್ಯೂಜಿಲ್ಯಾಂಡ್‌ ಮತ್ತು ಭಾರತ(India vs New Zealand 1st Test) ವಿರುದ್ಧ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಆರ್‌ಸಿಬಿ(rcb fans) ಅಭಿಮಾನಿಯೊಬ್ಬ ರೋಹಿತ್‌ ಶರ್ಮಾ(Rohit Sharma) ಅವರಲ್ಲಿ ಆರ್‌ಸಿಬಿ ತಂಡ ಸೇರುವಂತೆ ಮನವಿ ಮಾಡಿದ್ದಾನೆ. ಈ ವಿಡಿಯೊ ವೈರಲ್‌ ಆಗಿದ್ದು, ರೋಹಿತ್‌ ಮುಂಬೈ ತಂಡ ತೊರೆದು ಆರ್‌ಸಿಬಿ ಸೇರಲಿದ್ದಾರಾ ಎಂಬ ಚರ್ಚೆ ಮತ್ತೆ ಚುರುಕುಗೊಂಡಿದೆ.

ರೋಹಿತ್‌ ಮೈದಾನದಿಂದ ಪೆವಿಲಿಯನ್‌ ಕಡೆಗೆ ತೆರಳುತ್ತಿದ್ದ ವೇಳೆ ಕೆಲ ಅಭಿಮಾನಿಗಳು ರೋಹಿತ್‌ ಬಳಿ ನೀವು ಈ ಬಾರಿ ಐಪಿಎಲ್‌ನಲ್ಲಿ ಯಾವ ತಂಡ ಸೇರುತ್ತೀರಿ? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್‌ ಯಾವ ತಂಡ ಎಂದು ನೀವೇ ಹೇಳಿ? ಎಂದರು. ಇದೇ ವೇಳೆ ಆರ್‌ಸಿಬಿ ಅಭಿಮಾನಿಯೊಬ್ಬ ನಮ್ಮ ಆರ್‌ಸಿಬಿಗೆ ಬನ್ನಿ ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ.

ಕೆಳವು ದಿನಗಳ ಹಿಂದೆ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌(Mohammad Kaif) ಕೂಡ ಆರ್‌ಸಿಬಿ(RCB)ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದರು. ರೋಹಿತ್‌ ಶರ್ಮಾ(Rohit Sharma) ಅವರು ಹರಾಜಿನಲ್ಲಿ ಕಾಣಿಸಿಕೊಂಡರೆ ಅವರನ್ನು ಖರೀದಿಸಲೇ ಬೇಕು ಎಂದು ಹೇಳಿದ್ದರು.

ಇದನ್ನೂ ಓದಿ IPL 2025: ಆರ್‌ಸಿಬಿ ರಿಟೈನ್‌ ಪಟ್ಟಿ ಅಂತಿಮ; ಕೊಹ್ಲಿ ಮೊದಲ ಆಯ್ಕೆ

ʼರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ. ಟಿ20 ವಿಶ್ವಕಪ್‌ ಗೆದ್ದ ನಾಯಕ. ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್‌ ಮಾಡಿದ್ದಾರೆ. ಹೀಗಾಗಿ ಆರ್‌ಸಿಬಿ ಅವರ​ ಖರೀದಿಗೆ ಪ್ಲಾನ್​ ಮಾಡಬೇಕು. ಅಲ್ಲದೆ ರೋಹಿತ್‌ ಅವರನ್ನು ಹೇಗಾದರು ಮಾಡಿ ಆರ್​​ಸಿಬಿಗೆ ಬರುವಂತೆ ಒಪ್ಪಿಸಬೇಕು. ರೋಹಿತ್​ ಆರ್​​ಸಿಬಿ ನಾಯಕನಾದರೆ​, ಅವರು ರನ್​​ ಕಲೆ ಹಾಕದಿದರೂ ಕಪ್​ ಗೆಲ್ಲಿಸುತ್ತಾರೆ. ಜತೆಗೆ ಬಲಿಷ್ಠ ತಂಡವನ್ನು ಕಟ್ಟುತ್ತಾರೆʼ ಎಂದು ಕೈಫ್‌ ಸ್ಟಾರ್‌ ಸ್ಪೋರ್ಟ್ಸ್‌ ಜತೆಗಿನ ಸಂದರ್ಶನದಲ್ಲಿ ಹೇಳಿದ್ದರು. ಕೈಫ್‌ ಕೂಡ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು. ಇದೀಗ ಆರ್‌ಸಿಬಿ ಅಭಿಮಾನಿಗಳು ಕೂಡ ರೋಹಿತ್‌ ಆರ್‌ಸಿಬಿ ಸೇರುವಂತೆ ನೇರವಾಇ ರೋಹಿತ್‌ಗೆ ಮನವಿ ಮಾಡಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್​ ತಂಡಗಳು ರಿಲೀಸ್​​ ಮತ್ತು ರೀಟೈನ್​ ಲಿಸ್ಟ್​ ಬಿಡುಗಡೆ ಮಾಡಲಿದ್ದಾರೆ. 6 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಜತೆಗೆ ಒಂದು ಆರ್‌ಟಿಎಂ ಬಳಕೆಗೂ ಅವಕಾಶವಿದೆ. ಹೀಗಾಗಿ ಮುಂಬೈ ತಂಡ ರೋಹಿತ್‌ ಅವರನ್ನು ತಂಡದಿಂದ ಬಿಟ್ಟುಕೊಡಲಿದೆಯಾ ಎಂದು ಕಾದು ನೋಡಬೇಕಿದೆ.