Friday, 22nd November 2024

ಮೂರನೇ ಟೆಸ್ಟ್‌: ರೋಹಿತ್ ಶತಕ, ಜಡೇಜಾ ಅರ್ಧಶತಕ

ರಾಜಕೋಟ್: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ (125) ಅಮೋಘ ಇನಿಂಗ್ಸ್ ಕಟ್ಟಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್‌ ಮಾಡಲು ಮುಂದಾಯಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಒಂದು ತುದಿಯಲ್ಲಿ ವಿಕೆಟ್‌ಗಳನ್ನು ನೀಡುತ್ತಾ ಸಾಗಿದರು. ಆದರೆ ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ(83) ಜೊತೆಗೆ ಶತಕದ ಜೊತೆಯಾಟ ನೀಡಿದರು.

ಟಾಮ್ ಹಾರ್ಟ್ಲಿ ಅವರ ಬೌಲಿಂಗ್‌ ವೇಳೆ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾಗೆ ಜೀವದಾನ ಲಭಿಸಿತು. ಪಂದ್ಯದ 13ನೇ ಓವರ್‌ನಲ್ಲಿ ಸ್ವೀಪ್‌ ಶಾಟ್‌ ಬಾರಿಸಲು ಮುಂದಾಗಿ ಚೆಂಡು ಗಾಳಿಯಲ್ಲಿ ತೇಲುತ್ತದೆ. ಆಗ ಜೋ ರೂಟ್‌ ಕ್ಯಾಚ್‌ ಡ್ರಾಪ್‌ ಮಾಡಿದರು.

ಇದರ ಸಂಪೂರ್ಣ ಲಾಭ ಪಡೆದು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು.  ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯುತ್ತಿದೆ. ಭಾರತ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ನಾಲ್ಕು ಬದಲಾವಣೆಯಿಂದ ಅಖಾಡಕ್ಕೆ ಇಳಿದಿದೆ.

ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಚೊಚ್ಚಲ ಟೆಸ್ಟ್ ಆಡಲಿದ್ದಾರೆ. ಇಬ್ಬರೂ ಆಟಗಾರರು ಅಂತರಾಷ್ಟ್ರೀಯ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

22 ವರ್ಷದ ಧ್ರುವ್ ಜುರೆಲ್ 2022 ರಲ್ಲಿ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ವಿದರ್ಭ ವಿರುದ್ಧ ಉತ್ತರ ಪ್ರದೇಶ ಪರ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದರು.

2014 ರಲ್ಲಿ, ಸರ್ಫರಾಜ್ ಖಾನ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ ತಮ್ಮ ಲಿಸ್ಟ್-ಎ ಚೊಚ್ಚಲ ಪಂದ್ಯವನ್ನು ಆಡಿದರು. 2014 ರ ರಣಜಿ ಟ್ರೋಫಿಯಲ್ಲಿ ಬಂಗಾಳದ ವಿರುದ್ಧ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದರು.

ಭಾರತ ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.