ಅಬುಧಾಬಿ: ಋತುರಾಜ್ ಗಾಯಕ್ವಾಡ್ ಅವರ ಅಮೋಘ ಶತಕಕ್ಕೆ ರಾಜಸ್ಥಾನ್ ರಾಯಲ್ಸ್ ಬರೆ ಎಳೆದಿದೆ. ಶನಿವಾರ ರಾತ್ರಿಯ ದೊಡ್ಡ ಮೊತ್ತದ ಮೇಲಾಟದಲ್ಲಿ ಸ್ಯಾಮ್ಸನ್ ಬಳಗ ಚೆನ್ನೈಯನ್ನು 7 ವಿಕೆಟ್ಗಳಿಂದ ಮಣಿಸಿ 5ನೇ ಜಯ ದಾಖಲಿಸಿದೆ.
ಬಲಿಷ್ಠ ಚೆನ್ನೈ ಸೂಪರ್ಕಿಂಗ್ಸ್ಗೆ ತಿರುಗೇಟು ನೀಡಿದ ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್ಗಳಿಂದ ಜಯ ದಾಖಲಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿತು. ಲೀಗ್ನಲ್ಲಿ 5ನೇ ಜಯ ದಾಖಲಿಸಿದ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಮತ್ತೊಂದೆಡೆ, ಯುಎಇಯಲ್ಲಿ ಸತತ 4 ಜಯ ದಾಖಲಿಸಿದ್ದ ಎಂಎಸ್ ಧೋನಿ ಬಳಗಕ್ಕೆ ಮೊದಲ ಸೋಲು ಇದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ, ಋತುರಾಜ್ ಗಾಯಕ್ವಾಡ್ (101*ರನ್) ಶತಕದಾಟದ ನೆರವಿನಿಂದ 4 ವಿಕೆಟ್ಗೆ 189 ರನ್ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (50 ರನ್) ಹಾಗೂ ಶಿವಂ ದುಬೆ (64*ರನ್) ಅಬ್ಬರದ ಫಲವಾಗಿ 17.3 ಓವರ್ಗಳಲ್ಲಿ 3 ವಿಕೆಟ್ಗೆ 190 ರನ್ಗಳಿಸಿ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ 4 ವಿಕೆಟಿಗೆ 189 ರನ್ ಪೇರಿಸಿದರೆ, ರಾಜಸ್ಥಾನ್ 17.3 ಓವರ್ಗಳಲ್ಲಿ 3 ವಿಕೆಟಿಗೆ 190 ರನ್ ಬಾರಿಸಿತು. ಮೊದಲ ವಿಕೆಟಿಗೆ 5.2 ಓವರ್ಗಳಿಂದ 77 ರನ್ ಪೇರಿಸಿದ ರಾಜಸ್ಥಾನ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ.
ಚೆನ್ನೈ ಪರ ಆರಂಭಕಾರ ಋತುರಾಜ್ ಗಾಯಕ್ವಾಡ್ ಅಜೇಯ 101 ರನ್ ಬಾರಿಸಿ ಮೆರೆದರು. ಮುಸ್ತಫಿಜುರ್ ಅವರ ಇನ್ನಿಂಗ್ಸಿನ ಅಂತಿಮ ಎಸೆತವನ್ನು ಮಿಡ್ ವಿಕೆಟ್ ಮೂಲಕ ಸಿಕ್ಸರ್ಗೆ ಬಡಿದಟ್ಟಿದ ಗಾಯಕ್ವಾಡ್ ತಮ್ಮ ಮೊದಲ ಐಪಿಎಲ್ ಸೆಂಚುರಿಯನ್ನು ಪೂರ್ತಿಗೊಳಿಸಿದರು. ಇದು ಕೇವಲ 60 ಎಸೆತಗಳಲ್ಲಿ ಬಂತು. ಸಿಡಿಸಿದ್ದು 5 ಸಿಕ್ಸರ್ ಹಾಗೂ 9 ಫೋರ್.
ಇದು ಐಪಿಎಲ್ನಲ್ಲಿ ಚೆನ್ನೈ ಪರ ದಾಖಲಾದ 9ನೇ ಸೆಂಚುರಿ. ಅವರು ಚೆನ್ನೈ ಪರ ಶತಕ ಬಾರಿಸಿದ ಕಿರಿಯ ಆಟಗಾರನೂ ಹೌದು (24 ವರ್ಷ, 244 ದಿನ). ರವೀಂದ್ರ ಜಡೇಜ 15 ಎಸೆತಗಳಿಂದ 32 ರನ್ ಹೊಡೆದು ಅಜೇಯರಾಗಿ ಉಳಿದರು. ಗಾಯಕ್ವಾಡ್-ಜಡೇಜ ಕೇವಲ 22 ಎಸೆತಗಳಿಂದ 55 ರನ್ ಜತೆಯಾಟ ನಿಭಾಯಿಸಿದರು. ಕೊನೆಯ 5 ಓವರ್ಗಳಲ್ಲಿ 73 ರನ್ ಹರಿದು ಬಂತು.