Sunday, 15th December 2024

ರೋಚಕ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್

ಮುಂಬೈ : ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ 7 ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಜಯ ಗಳಿಸಿತು.

ಜೋಸ್ ಬಟ್ಲರ್ ಶತಕ ಸಿಡಿಸಿ ಸಂಭ್ರಮಿಸಿದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯಜು ವೇಂದ್ರ ಚಾಹಲ್ ಹ್ಯಾಟ್ರಿಕ್‌ ಮೂಲಕ ಮಿಂಚಿದರು.

ಬಟ್ಲರ್ ಶತಕದ ಬಲದಿಂದ ರಾಜಸ್ಥಾನ 5ಕ್ಕೆ 217 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ ಆಯರನ್ ಫಿಂಚ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ಬಲದಿಂದ ಗೆಲುವಿನತ್ತ ಹೆಜ್ಜೆ ಹಾಕಿತ್ತು. ಆದರೆ 17ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ಚಾಹಲ್ ಪಂದ್ಯಕ್ಕೆ ತಿರುವು ನೀಡಿದರು.

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಮಾಡಿದ ಬಟ್ಲರ್ ಅವರ ಬಲದಿಂದ ರಾಜಸ್ಥಾನ ಈ ಆವೃತ್ತಿಯ ಗರಿಷ್ಠ ಮೊತ್ತ ದಾಖಲಿಸಿತು. ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4ಕ್ಕೆ 216 ರನ್ ಗಳಿಸಿದ್ದು ಈ ವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಕೋಲ್ಕತ್ತ ಎದುರು ಡೆಲ್ಲಿ ಕ್ಯಾಪಿಟಲ್ಸ್ 5ಕ್ಕೆ 215 ರನ್ ಗಳಿಸಿತ್ತು.

ಕೋಲ್ಕತ್ತ ಬೌಲರ್‌ಗಳನ್ನು ನಿರಾತಂಕವಾಗಿ ಎದುರಿಸಿದ ಜೋಸ್ ಬಟ್ಲರ್ ಲೀಲಾಜಾಲವಾಗಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸಿ ದರು. 61 ಎಸೆತಗಳಲ್ಲಿ 103 ರನ್ ಗಳಿಸಿದ ಅವರ ಬ್ಯಾಟಿನಿಂದ 9 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸಿಡಿದವು.

ದೇವದತ್ತ ಜೊತೆ ಮೊದಲ ವಿಕೆಟ್‌ಗೆ 97 ರನ್ ಗಳಿಸಿದ ಅವರು ಇನಿಂಗ್ಸ್‌ಗೆ ಭದ್ರ ತಳಪಾಯ ಹಾಕಿಕೊಟ್ಟರು.

ದೇವದತ್ತ ಪಡಿಕ್ಕಲ್ ಔಟಾದ ನಂತರ ಕ್ರೀಸ್‌ಗೆ ಬಂದ ನಾಯಕ ಸಂಜು ಸ್ಯಾಮ್ಸನ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್‌ಗೆ ಬಟ್ಲರ್ ಮತ್ತು ಸಂಜು 67 ರನ್‌ ಸೇರಿಸಿದರು. 34 ಎಸೆತಗಳಲ್ಲಿ ಈ ರನ್‌ಗಳು ಬಂದಿದ್ದವು. ಪ್ಯಾಟ್ ಕಮಿನ್ಸ್ ಎಸೆತವನ್ನು ಹುಕ್ ಮಾಡುವ ಪ್ರಯತ್ನದಲ್ಲಿ ವರುಣ್‌ ಚಕ್ರವರ್ತಿಗೆ ಕ್ಯಾಚ್ ಕೊಡುವ ಮೊದಲು ಬಟ್ಲರ್‌ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದ್ದರು.

ಕೋಲ್ಕತ್ತದ ಯಾವ ಬೌಲರ್‌ಗೂ ಅವರನ್ನು ನಿಯಂತ್ರಿಸಲು ಆಗಲಿಲ್ಲ. ಪ್ಯಾಟ್ ಕಮಿನ್ಸ್ 4 ಓವರ್‌ಗಳಲ್ಲಿ 50 ರನ್ ನೀಡಿದರೆ ಉಮೇಶ್ ಯಾದವ್ 4 ಓವರ್‌ಗಳಲ್ಲಿ 44 ರನ್ ಕೊಟ್ಟರು.