RR vs LSG: ಸೋಲಿಗೆ ಸಂದೀಪ್ ದುಬಾರಿ ಓವರ್ ಕಾರಣ ಎಂದ ನಾಯಕ ಪರಾಗ್
ಸಂದೀಪ್ ಶರ್ಮಾ 20ನೇ ಓವರ್‌ನಲ್ಲಿ ಬರೋಬ್ಬರಿ 27 ರನ್‌ಗಳನ್ನು ಬಿಟ್ಟು ಕೊಟ್ಟರು ಇದು ನಮಗೆ ಹಿನ್ನಡೆಯಾಯಿತು. ಒಂದೊಮ್ಮೆ ಅವರು ಕನಿಷ್ಠ 15 ರನ್ ಬಿಟ್ಟುಕೊಟ್ಟಿದ್ದರೂ ನಾವು ಪಂದ್ಯ ಗೆಲ್ಲಬಹುದಾಗಿತ್ತು ಎಂದು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ದೂರಿದ್ದಾರೆ.


ಜೈಪುರ: ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ವಿರುದ್ಧ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್(RR vs LSG) ಕೈಚಿಲ್ಲಿತ್ತು. ಕೇವಲ 2 ರನ್ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತ್ತು. ಇದೀಗ ಸೋಲಿಗೆ ನಾಯಕ ರಿಯಾನ್ ಪರಾಗ್(Riyan Parag) ಅವರು ವೇಗಿ ಸಂದೀಪ್ ಶರ್ಮ(Sandeep Sharma) ಕಾರಣ ಎಂದಿದ್ದಾರೆ. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಸಂದೀಪ್ ದುಬಾರಿಯಾದದ್ದು ತಂಡಕ್ಕೆ ಭಾರೀ ಹಿನ್ನಡೆಯಾಯಿತು ಎಂದು ಪರಾಗ್ ಹೇಳಿದ್ದಾರೆ.
ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಲಕ್ನೋ ತಂಡ, ಐಡೆನ್ ಮಾರ್ಕ್ರಮ್ ಹಾಗೂ ಆಯುಷ್ ಬದೋನಿ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ್ 17ನೇ ಓವರ್‌ವರೆಗೂ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಾದ ಅವಕಾಶವನ್ನು ಹೊಂದಿತ್ತು. ಆದರೆ 18 ಮತ್ತು 20ನೇ ಓವರ್‌ನಲ್ಲಿ ಆವೇಶ್ ಖಾನ್ ಪರಿಣಾಮಕಾರಿ ಬೌಲಿಂಗ್ ನಡೆಸಿ ರಾಜಸ್ಥಾನ್ ತಂಡವನ್ನು ಕಟ್ಟಿ ಹಾಕಿದರು. ಕೇವಲ 2 ರನ್ ಅಂತರದಿಂದ ರಾಜಸ್ಥಾನ್ ಸೋಲು ಕಂಡಿತು.
ಇದನ್ನೂ ಓದಿ IPL 2025: ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಐಪಿಎಲ್ಗೆ ಎಂಟ್ರಿ ಕೊಟ್ಟ ಅಭಿಷೇಕ್ ನಾಯರ್
ಸೋಲಿನ ಬಳಿಕ ಮಾತನಾಡಿದ ಪರಾಗ್, ಈ ಸೋಲು ನಿಜಕ್ಕೂ ಬೇಸರ ತಂದಿದೆ. ನಾವು ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್ ನೀಡಿದ್ದೆವು. ಇದುವೇ ಸೋಲಿಗೆ ಕಾರಣವಾಯಿತು ಎಂದರು. ಸಂದೀಪ್ ಶರ್ಮಾ 20ನೇ ಓವರ್‌ನಲ್ಲಿ ಬರೋಬ್ಬರಿ 27 ರನ್‌ಗಳನ್ನು ಬಿಟ್ಟು ಕೊಟ್ಟರು ಇದು ನಮಗೆ ಹಿನ್ನಡೆಯಾಯಿತು. ಒಂದೊಮ್ಮೆ ಅವರು ಕನಿಷ್ಠ 15 ರನ್ ಬಿಟ್ಟುಕೊಟ್ಟಿದ್ದರೂ ನಾವು ಪಂದ್ಯ ಗೆಲ್ಲಬಹುದಾಗಿತ್ತು ಎಂದರು.
ಸಂದೀಪ್ ಎಸೆದ ಈ ಓವರ್‌ನಲ್ಲಿ ಅಬ್ದುಲ್ ಸಮದ್ 4 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಕೊನೆಯ ಓವರ್ ಎಸೆದಿದ್ದ ಸಂದೀಪ್ ದುಬಾರಿಯಾಗಿ ಪಂದ್ಯ ಸೋಲಿಗೆ ಕಾರಣರಾಗಿದ್ದರು.