Wednesday, 4th December 2024

RSA vs AFG : ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಏಕದಿನ ಸರಣಿ ಗೆದ್ದ ಅಫಘಾನಿಸ್ತಾನ

RSA vs AFG

ಶಾರ್ಜಾ: ರಹಮಾನುಲ್ಲಾ ಗುರ್ಬಾಜ್(Rahmanullah Gurbaz) ಬಾರಿಸಿದ ಸೊಗಸಾದ ಶತಕ ಮತ್ತು ರಶೀದ್‌ ಖಾನ್‌(Rashid Khan) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್‌ ನೆರವಿನಿಂದ ಅಫಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ(RSA vs AFG) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭರ್ಜರಿ 177 ರನ್‌ಗಳ ಗೆಲುವು ಸಾಧಿಸಿದೆ. ಜತೆಗೆ 3 ಪಂದ್ಯಗಳ ಸರಣಿಯಲ್ಲಿ 2-0 ಸಾಧಿಸಿ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾವನ್ನು ಏಕದಿನ ಸರಣಿಯಲ್ಲಿ ಸೋಲಿಸಿದ ಐತಿಹಾಸಿಕ ದಾಖಲೆ ಬರೆದಿದೆ. ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫಘಾನಿಸ್ತಾನ ಆರಂಭದಲಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿ ಕೇವಲ 4 ವಿಕೆಟ್‌ ನಷ್ಟಕ್ಕೆ 311 ರನ್‌ ಕಲೆಹಾಕುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಬೃಹತ್‌ ಮೊತ್ತವನ್ನು ಕಂಡು ಕಂಗಾಲಾದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಸತತವಾಗಿ ವಿಕೆಟ್‌ ಕಳೆದುಕೊಂಡು 34.2 ಓವರ್‌ಗಳಲ್ಲಿ 134  ರನ್‌ಗೆ ಸರ್ವಪತನ ಕಂಡಿತು.19 ರನ್‌ಗೆ 5 ವಿಕೆಟ್‌ ಕಿತ್ತ ರಶೀದ್‌ ಖಾನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ರಹಮಾನುಲ್ಲಾ ಗುರ್ಬಾಜ್ 110 ಎಸೆತ ಎದುರಿಸಿ 10 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 105 ರನ್‌ ಬಾರಿಸಿದರೆ, ಅಜ್ಮತುಲ್ಲಾ ಒಮರ್ಜಾಯ್ ಬಿರುಸಿನ ಬ್ಯಾಟಿಂಗ್‌ ಮೂಲಕ 86 ರನ್‌ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 6 ಸಿಕ್ಸರ್‌ ಮತ್ತು 5ಬೌಂಡರಿ ಸಿಡಿಯಿತು. ರಹಮತ್ ಶಾ ಕೂಡ 50 ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಈ ಮೂಬರ ಬ್ಯಾಟಿಂಗ್‌ ಅಬ್ಬರಕ್ಕೆ ಹರಿಣ ಪಡೆಗಳ ಬೌಲರ್‌ಗಳು ಸಂಪೂರ್ಣ ಲಯ ಕಳೆದುಕೊಂಡರು.

ಇದನ್ನೂ ಓದಿ Hardik Pandya: ಟೆಸ್ಟ್​ ಕ್ರಿಕೆಟ್​ಗೆ ಹಾರ್ದಿಕ್​ ಪಾಂಡ್ಯ ಪುನರಾಗಮನ?

ಚೇಸಿಂಗ್‌ ವೇಳೆ ರಶೀದ್‌ ಖಾನ್‌ ಮತ್ತು ನಂಗೆಯಲಿಯಾ ಖರೋಟೆ ಜಿದ್ದಿಗೆ ಬಿದ್ದಂತೆ ಬೌಲಿಂಗ್‌ ದಾಳಿ ನಡೆಸಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ಗೆ ಅಟ್ಟಿದರು. ರಶೀದ್‌ ಖಾನ್‌ 9 ಓವರ್‌ ನಡೆಸಿ ಒಂದು ಮಡನ್‌ ಸಹಿತ 19 ವೆಚ್ಚದಲ್ಲಿ 5 ವಿಕೆಟ್‌ ಕಿತ್ತರು. ನಂಗೆಯಲಿಯಾ ಖರೋಟೆ 26 ರನ್‌ಗೆ 4 ವಿಕೆಟ್‌ ಉರುಳಿಸಿದರು. ಉಭಯ ಬೌಲರ್‌ಗಳ ಈ ಬೌಲಿಂಗ್‌ ಆರ್ಭಟದ ಮುಂದೆ ಹರಿಣ ಪಡೆಯ ಬ್ಯಾಟಿಂಗ್‌ ಸಂಪೂರ್ಣ ವಿಫಲವಾಯಿತು.