ಬ್ರಿಸ್ಬೆನ್: ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್’ಮನ್ ಗಳು ವಿಫಲರಾಗಿ, ಬೌಲರ್ ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ತಂಡದ ಪಾಲಿಗೆ ಆಪದ್ಬಾಂಧವರಾದರು. ಅಂತೆಯೇ, ಈ ಜೋಡಿ ಹಲವು ದಾಖಲೆಗಳನ್ನು ಮಾಡಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 369 ರನ್ ಬಾರಿಸಿ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಪರ ಬ್ಯಾಟ್ಸ್ ಮನ್ ಗಳು ಗರಿಷ್ಠ ರನ್ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತೀವ್ರ ಹಿನ್ನಡೆಗೆ ಸಿಲುಕಬೇಕಿತ್ತು.
62 ರನ್ ಬಾರಿಸುವ ಮೂಲಕ ಪದಾರ್ಪಣೆ ಪಂದ್ಯದಲ್ಲೇ 7ನೇ ಕ್ರಮಾಂಕದಲ್ಲಿ 62 ರನ್ ಪೇರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಹಿಂದೆ 1911ರ ಡಿಸೆಂಬರ್ ನಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ತಂಡದ ಬೌಲರ್ ಫ್ರಾಂಕ್ ಪೋಸ್ಟರ್ ಪಾದಾರ್ಪಣೆ ಪಂದ್ಯದಲ್ಲಿ 56 ರನ್ ಪೇರಿಸಿದ್ದರು.
ಈ ಜೋಡಿ ಬರೋಬ್ಬರಿ 123 ರನ್ ಜೊತೆಯಾಟವಾಡಿದ್ದಾರೆ. 7ನೇ ವಿಕೆಟ್ ಜೊತೆಯಾಟದಲ್ಲಿ ಭಾರತ ಪರ ಅತೀ ಹೆಚ್ಚು ರನ್ ಜೊತೆಯಾಟ ಇದಾಗಿದೆ.
ಸುಂದರ್ 62 ರನ್ ಬಾರಿಸಿದ್ದರೆ ಶಾರ್ದೂಲ್ ಠಾಕೂರ್ 67 ರನ್ ಪೇರಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಗೌರವ ಮೊತ್ತ ಪೇರಿಸಲು ಸಾಧ್ಯವಾಗಿದೆ. ಭಾರತ ಮೊದಲ ಇನ್ನಿಂಗ್ಸ್ 336 ರನ್ ಗಳಿಗೆ ಸರ್ವಪತನ ಕಂಡಿದೆ.