Monday, 28th October 2024

Ruturaj Gaikwad: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ; ಋತುರಾಜ್ ಗಾಯಕ್ವಾಡ್‌ಗೆ ನಾಯಕ ಪಟ್ಟ

Ruturaj Gaikwad

ಹೊಸದಿಲ್ಲಿ: ಅಕ್ಟೋಬರ್ 31ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ 15 ಸದಸ್ಯರ ಭಾರತ ಎ ತಂಡ (India A squad)ವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಭಾರತ ಎ ತಂಡದ ನಾಯಕನಾಗಿ ಋತುರಾಜ್ ಗಾಯಕ್ವಾಡ್ (Ruturaj Gaikwad) ಅವರನ್ನು ಆಯ್ಕೆ ಮಾಡಲಾಗಿದ್ದು, ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ (Abhimanyu Easwaran) ಉಪನಾಯಕರಾಗಲಿದ್ದಾರೆ.

ಇತ್ತೀಚಿನ ದೇಶೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಇಶಾನ್ ಕಿಶನ್ ಭಾರತೀಯ ತಂಡಕ್ಕೆ ಮರಳಿದ್ದಾರೆ. ಬುಚಿ ಬಾಬು ಟೂರ್ನಿ, ದುಲೀಪ್ ಟ್ರೋಫಿ, ಇದೀಗ ರಣಜಿಯಲ್ಲಿ ಸತತ ಮೂರು ಶತಕ ಸಿಡಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ರೈಲ್ವೇಸ್ ವಿರುದ್ಧ ಜಾರ್ಖಂಡ್‌ ಪರ ರಣಜಿಯಲ್ಲಿ ಶತಕ ಸಿಡಿಸಿದ್ದು ಆಯ್ಕೆ ಸಮಿತಿಯ ಗಮನ ಸೆಳೆದಿದೆ. ಹೀಗಾಗಿ ಅವರಿಗೆ ಮಣೆ ಹಾಕಲಾಗಿದೆ. ಕಳೆದ ಋತುವಿನಲ್ಲಿ ರಣಜಿ ಆಡುವಂತೆ ಕೇಳಿದರೂ ನಿರ್ಲಕ್ಷ್ಯ ತೋರಿದ್ದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ವಾರ್ಷಿಕ ಗುತ್ತಿಗೆ ಆಟಗಾರರ ಪಟ್ಟಿಯಿಂದ ಬಿಸಿಸಿಐ ಹೊರಗಿಟ್ಟಿತ್ತು.

ಭಾರತ ಎ ತಂಡ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಮ್ಯಾಕೆ ಮತ್ತು ಮೆಲ್ಬೋರ್ನ್​ ಮೈದಾನದಲ್ಲಿ 2 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದ್ದು, ನಂತರ ಪರ್ತ್‌ನಲ್ಲಿ ಹಿರಿಯ ಭಾರತೀಯ ತಂಡದ ವಿರುದ್ಧ ಮೂರು ದಿನಗಳ ಅಂತರ್-ಸ್ಕ್ವಾಡ್ ಪಂದ್ಯದಲ್ಲಿ ಭಾಗವಹಿಸಲಿದೆ. 2024/25ರ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಟೀಮ್ ಇಂಡಿಯಾದ ಪೂರ್ವಸಿದ್ಧತಾ ಶಿಬಿರದ ಭಾಗವಾಗಿ ಅಂತರ್-ಸ್ಕ್ವಾಡ್ ಪಂದ್ಯ ನಡೆಯಲಿದೆ.

ನವೆಂಬರ್​ 22ರಿಂದ 2025ರ ಜನವರಿ 6ರ ತನಕ ಇಂಡೋ-ಆಸೀಸ್ ನಡುವೆ ಐದು ಪಂದ್ಯಗಳ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ರೋಹಿತ್ ಸ್ಥಾನವನ್ನು ಗಾಯಕ್ವಾಡ್ ತುಂಬಲಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಅಭಿಮನ್ಯು ಈಶ್ವರನ್​ ಕೂಡ ಪೈಪೋಟಿ ನೀಡುತ್ತಿದ್ದು, ಭಾರತ ಎ ತಂಡದಲ್ಲಿ ಮಿಂಚಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ತವಕದಲ್ಲಿದ್ದಾರೆ. ಈಶ್ವರನ್ ದುಲೀಪ್ ಟ್ರೋಫಿಯಲ್ಲಿ 2 ಮತ್ತು ಇರಾನಿ ಕಪ್‌ನಲ್ಲಿ 1 ಶತಕ ಭಾರಿಸಿದ್ದಾರೆ.

ದೇವದತ್ ಪಡಿಕ್ಕಲ್, ಬಾಬಾ ಇಂದ್ರಜಿತ್ ಮತ್ತು ರಿಕಿ ಭುಯಿ ಭಾರತ ಎ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇತ್ತೀಚೆಗೆ ಗಮನ ಸೆಳೆದ ನಿತೀಶ್ ಕುಮಾರ್ ರೆಡ್ಡಿ ಅವರನ್ನೂ ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಎ ತಂಡ: ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಬಾಬಾ ಇಂದ್ರಜಿತ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಯಶ್ ದಯಾಳ್, ನವದೀಪ್ ಸೈನಿ, ಮಾನವ್ ಸುತಾರ್, ತನುಷ್ ಕೋಟ್ಯಾನ್.

ಈ ಸುದ್ದಿಯನ್ನೂ ಓದಿ: Cheteshwar Pujara: ಚಂಢೀಗಡ ವಿರುದ್ಧ ಶತಕ ಬಾರಿಸಿ ಹಲವು ದಾಖಲೆ ಬರೆದ ಚೇತೇಶ್ವರ್ ಪೂಜಾರ