ಸೆಂಟ್ ಲೂಸಿಯಾ : ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡಾ ಮಾರಕ ದಾಳಿಗೆ ಮಾರುತ್ತರ ನೀಡಲು ವಿಫಲವಾದ ವೆಸ್ಟ್ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 63 ರನ್‌ಗಳ ಭಾರಿ ಅಂತರದಿಂದ ಸೋತಿದೆ.
ಸೆಂಟ್ ಲೂಸಿಯಾದಲ್ಲಿ ನಡೆದ ಪಂದ್ಯವು ಮೂರನೇ ದಿನ ಭೋಜನ ವಿರಾಮಕ್ಕೆ ಮುನ್ನವೇ ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಮುಗ್ಗರಿಸಿತು.
ಪ್ರವಾಸಿ ದಕ್ಷಿಣ ಆಫ್ರಿಕಾದ 322 ರನ್‌ಗಳಿಗೆ ಉತ್ತರವಾಗಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 97 ರನ್‌ಗಳಿಗೆ ಆಲೌಟ್ ಆಗಿದ್ದ ವೆಸ್ಟ್ ಇಂಡೀಸ್ ಫಾಲೊ ಅನ್ ಅನುಭವಿಸಿ ಎರಡನೇ ಇನಿಂಗ್ಸ್‌ನಲ್ಲೂ ಕುಸಿಯಿತು. ಪ್ರವಾಸಿ ತಂಡದ ವೇಗದ ಬೌಲರ್‌ಗಳು ಬೌನ್ಸ್ ಮತ್ತು ಸಾಕಷ್ಟು ಸೀಮ್ ಹೊಂದಿದ್ದ ಪಿಚ್‌ನ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾದರು.
ವಿಂಡೀಸ್ ಪರ ರಾಸ್ಟನ್ ಚೇಸ್ ಕೇಶವ್ ಮಹರಾಜ್ ಅವರ ಸ್ಪಿನ್ ಮೋಡಿಗೆ ಔಟ್ ಆಗುವ ಮುನ್ನ ಗರಿಷ್ಠ 62 ರನ್ ಗಳಿಸಿದರು. ರಬಾಡಾ 34 ರನ್‌ಗೆ 5 ವಿಕೆಟ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಲುಂಗಿ 19 ರನ್‌ಗಳಿಗೆ ಐದು ವಿಕೆಟ್ ಕಬಳಿಸಿದ್ದರು.