Friday, 18th October 2024

SAFF Championship 2024 : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5-2 ಗೋಲ್‌ಗಳಿಂದ ಸೋಲಿಸಿದ ಭಾರತ ತಂಡ

SAFF Championship 2024

ಬೆಂಗಳೂರು: ನೇಪಾಳದ ರಾಜಧಾನಿ ಕಠ್ಮಂಡುವಿನ ದಶರಥ ಕ್ರೀಡಾಂಗಣದಲ್ಲಿ ನಡೆದ ಸ್ಯಾಪ್‌ ಚಾಂಪಿಯನ್‌ಶಿಪ್‌ ಫುಟ್ಬಾಲ್‌ ಪಂದ್ಯದಲ್ಲಿ (SAFF Championship 2024) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5-2 ಗೋಲುಗಳಿಂದ ಭಾರತ ಸೋಲಿಸಿದೆ. ಈ ಮೂಲಕ ಭಾರತೀಯ ಮಹಿಳಾ ಸೀನಿಯರ್ ಫುಟ್ಬಾಲ್ ತಂಡವು ಎಸ್ಎಎಫ್ಎಫ್ ಮಹಿಳಾ ಚಾಂಪಿಯನ್ಶಿಪ್ 2024ರಲ್ಲಿ ಉತ್ತಮ ಅಭಿಯಾನ ಕಂಡಿದೆ. ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊಂದಿರುವ ಸಂತೋಷ್ ಕಶ್ಯಪ್ ಕೋಚಿಂಗ್‌ ನೇತೃತ್ವದ ತಂಡವು ಉತ್ತಮ ಆರಂಭ ಪಡೆಯಿತು.

5ನೇ ನಿಮಿಷದಲ್ಲಿ ಗ್ರೇಸ್ ಡಾಂಗ್ಮೆ  ಗೋಲ್ ಬಾರಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 17ನೇ ನಿಮಿಷದಲ್ಲಿ ಮನೀಷಾ ಕಲ್ಯಾಣ್ ಗಳಿಸಿದ ಗೋಲಿನಿಂದ ಭಾರತ ತಂಡ ಮೇಲುಗೈ ಸಾಧಿಸಿತು. ಈ ಪಂದ್ಯವು ಭಾರತಕ್ಕೆ ಹಲವಾರು ಹೆಗ್ಗುರುತು ಕ್ಷಣಗಳನ್ನು ಕಂಡಿತು. ನಾಯಕಿ ಲೊಯಿಟೊಂಗ್ಬಾಮ್ ಆಶಾಲತಾ ದೇವಿ ತಮ್ಮ 100 ನೇ ಪಂದ್ಯವನ್ನಾಡಿದರು. ಇದಲ್ಲದೆ, ಬಾಲಾ ದೇವಿ ತಮ್ಮ 50 ನೇ ಅಂತರರಾಷ್ಟ್ರೀಯ ಗೋಲು ಗಳಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಫುಟ್ಬಾಲ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತದ ಪ್ರಾಬಲ್ಯದ ಹೊರತಾಗಿಯೂ, ಹೆಚ್ಚುವರಿ ಸಮಯದ ಎರಡನೇ ನಿಮಿಷದಲ್ಲಿ ಸುಹಾ ಹಿರಾನಿ ಪೆನಾಲ್ಟಿಯನ್ನು ಪರಿವರ್ತಿಸಿ ಪಾಕಿಸ್ತಾನ ಪರ ಒಂದು ಗೋಲನ್ನು ಗಳಿಸಿದರು. ದ್ವಿತೀಯಾರ್ಧದ ಆರಂಭದ ನಿಮಿಷಗಳಲ್ಲಿ ಕೇಯ್ಲಾ ಮೇರಿ ಸಿದ್ದಿಕಿ ರಕ್ಷಣಾತ್ಮಕ ಆಟದ ನೆರವಿನಿಂದ ಪಾಕಿಸ್ತಾನ ಮತ್ತೊಂದು ಗೋಲ್‌ ತಮ್ಮದಾಗಿಸಿಕೊಂಡಿತು.

ಈ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 4 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದೆ. ಬ್ಲೂ ಟೈಗ್ರೆಸ್ ತನ್ನ ಎರಡನೇ ಗ್ರೂಪ್ ಎ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.