Tuesday, 19th November 2024

Syed Mushtaq Ali Trophy: ಕೇರಳ ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್‌ ನಾಯಕ!

ತಿರುವನಂತಪುರಂ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಲ್ಲಿ (Syed Mushtaq Ali Trophy) ಎರಡು ಭರ್ಜರಿ ಶತಕಗಳನ್ನು ಸಿಡಿಸಿದ ಬಳಿಕ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಅವರನ್ನು ಮುಂಬರುವ 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಕೇರಳ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿದೆ.

ನವೆಂಬರ್‌ 23 ರಿಂದ ಡಿಸೆಂಬರ್‌ 3ರವರೆಗೆ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿ ನಡೆಯಲಿದೆ. ಕೇರಳ ತಂಡ ಸಿ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ. ಈ ಗುಂಪಿನಲ್ಲಿ ಬಲಿಷ್ಠ ಮುಂಬೈ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ತಂಡಗಳ ವಿರುದ್ದ ಸಂಜು ಸ್ಯಾಮ್ಸನ್‌ ನಾಯಕತ್ವದ ಕೇರಳ ತಂಡ ಕಾದಾಟ ನಡೆಸಲಿದೆ.

ಸಂಜು ಸ್ಯಾಮ್ಸನ್‌ ನಾಯಕತ್ವದ ಕೇರಳ ತಂಡದಲ್ಲಿ ರಣಜಿ ನಾಯಕ ಸಚಿನ್‌ ಬೇಬಿ ಇದ್ದಾರೆ. ವಿಷ್ಣು ವಿನೋದ್‌ ಹಾಗೂ ಬಸಿಲ್‌ ತಂಪಿ ಕೂಡ ತಂಡಕ್ಕೆ ಕೀ ಆಟಗಾರರಾಗಿದ್ದಾರೆ. ಇನ್ನು ಹಿರಿಯ ಆಲ್‌ರೌಂಡರ್‌ ಜಲಜ್‌ ಸಕ್ಸೇನಾ ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಬಲವನ್ನು ತುಂಬಲಿದ್ದಾರೆ. ಇನ್ನು ಮೊಹ್ಮಮದ್‌ ಅಝರುದ್ದೀನ್‌, ರೋಹನ್‌ ಕಣ್ಣುಮಲ್‌ ಹಾಗೂ ಸಿಜೊಮಾನ್‌ ಜೋಸೆಫ್‌ ಒಳಗೊಂಡ ಪ್ರತಿಭಾವಂತ ಆಟಗಾರರು ಕೇರಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್‌-ತಿಲಕ್‌ ವರ್ಮಾ!

ಕೇರಳ ತಂಡ ತನ್ನ ಮೊದಲನೇ ಪಂದ್ಯವನ್ನು ಹೈದರಾಬಾದ್‌ನಲ್ಲಿ ಸರ್ವೀಸಸ್‌ ವಿರುದ್ದ ಕಾದಾಟ ನಡೆಸಲಿದೆ. ಚುಟುಕು ಟೂರ್ನಿಯಲ್ಲಿ ಶುಭಾರಂಭ ಪಡೆಯುವ ಸಲುವಾಗಿ ಈ ಪಂದ್ಯ ಕೇರಳ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ಈ ಗುಂಪಿನಲ್ಲಿ ಬಲಿಷ್ಠ ಮುಂಬೈ ತಂಡವಿದೆ. ಆದರೆ, ಸಂಜು ಸ್ಯಾಮ್ಸನ್‌ ರೆಡ್‌ ಹಾಟ್‌ ಫಾರ್ಮ್‌ನಲ್ಲಿರುವುದು ಕೇರಳ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಕೇರಳ ತಂಡ

ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್‌ ಕೀಪರ್‌), ಸಚಿನ್ ಬೇಬಿ, ರೋಹನ್ ಕುನ್ನುಮ್ಮಲ್, ಜಲಜ್ ಸಕ್ಸೇನಾ, ವಿಷ್ಣು ವಿನೋದ್, ಮೊಹಮ್ಮದ್ ಅಜರುದ್ದೀನ್, ಬಸಿಲ್ ಥಂಪಿ, ಸಲ್ಮಾನ್ ನಿಜಾರ್, ಅಬ್ದುಲ್ ಬಾಜಿತ್, ಅಖಿಲ್ ಸ್ಕಾರಿಯಾ, ಅಜ್ನಾಸ್ ಎಂ, ಸಿಜೋಮನ್ ಜೋಸೆಫ್, ಮಿಧುನ್ ಎಸ್, ವೈಶಾಖ್ ಕುಮಾರ್ ಸಿ ವಿ, ವಿನೋದ್ ಕುಮಾರ್ ಸಿ ವಿ , ಬೆಸಿಲ್ ಎನ್ ಪಿ, ಶರಫುದ್ದೀನ್ ಎನ್ ಎಂ, ನಿಧೀಶ್ ಎಂಡಿ

ಸಂಜು ಸ್ಯಾಮ್ಸನ್‌ ರೆಡ್‌ ಹಾಟ್‌ ಫಾರ್ಮ್‌

ಸಂಜು ಸ್ಯಾಮ್ಸನ್‌ ಅವರು ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಭಾರತ ತಂಡದ ಕಳೆದ ಐದು ಟಿ20ಐ ಪಂದ್ಯಗಳಿಂದ ಮೂರು ಶತಕಗಳನ್ನು ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ ಸಂಜು ಎರಡು ಶತಕಗಳ ಮೂಲಕ 194.59ರ ಸ್ಟ್ರೈಕ್‌ ರೇಟ್‌ನಲ್ಲಿ 216 ರನ್‌ಗಳನ್ನು ಕಲೆ ಹಾಕಿದ್ದಾರೆ. ಸಂಜು ಸ್ಯಾಮ್ಸನ್‌ ಅವರ ಬ್ಯಾಟಿಂಗ್‌ ಸಹಾಯದಿಂದ ಭಾರತ ತಂಡ, 3-1 ಅಂತರದಲ್ಲಿ ಟಿ20ಐ ಸರಣಿಯನ್ನು ಗೆದ್ದುಕೊಂಡಿದೆ.