Saturday, 14th December 2024

Sanju Samson: ಸಂಜು ಬಾರಿಸಿದ ಸತತ 5 ಸಿಕ್ಸರ್‌ ವಿಡಿಯೊ ಇಲ್ಲಿದೆ

ಹೈದರಾಬಾದ್‌: ಶನಿವಾರ ರಾತ್ರಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ(Rajiv Gandhi International Stadium) ನಡೆದಿದ್ದ ಬಾಂಗ್ಲಾದೇಶ(India vs Bangladesh) ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌(Sanju Samson) ಬಾರಿಸಿದ ಸತತ ಐದು ಸಿಕ್ಸರ್‌ಗಳ(Sanju Samson five sixes) ವಿಡಿಯೊ ವೈರಲ್‌ ಆಗಿದೆ.

ಆರಂಭಿಕ 2 ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾಗಿ ಟೀಕೆ ಎದುರಿಸಿದ್ದ ಕೇರಳದ ಸ್ಟಂಪರ್‌ ಸಂಜು ಸ್ಯಾಮ್ಸನ್‌ ಅಂತಿಮ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್‌ ಮೂಲಕ ಶತಕವನ್ನೇ ಬಾರಿಸಿ ಮಿಂಚಿದರು. ಜತೆಗೆ ತಮ್ಮ ವಿರುದ್ಧದ ಎಲ್ಲ ಟೀಕೆಗಳಿಗೂ ಅವರು ಬ್ಯಾಟ್‌ನಿಂದಲೇ ಉತ್ತರ ನೀಡಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸುವ ಯೋಜನೆಯೊಂದಿಗೆ ಕ್ರೀಸ್‌ಗಿಳಿದ ಸಂಜು, ವೇಗಿ ಟಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್​ನಲ್ಲಿ ಸತತ 4 ಬೌಂಡರಿ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದರು. ಇದಾದ ಬಳಿಕ ಇನಿಂಗ್ಸ್​ನ 10ನೇ ಓವರ್​ನಲ್ಲಿ ಏಕಾಂಗಿಯಾಗಿ 30 ರನ್ ಕಸಿದರು. ಯುವ ಸ್ಪಿನ್ನರ್‌ ರಿಷದ್ ಹೊಸೈನ್ ಎಸೆದ ಓವರ್​ನ ಮೊದಲ ಎಸೆತದಲ್ಲಿ ಒಂದೂ ರನ್​ಗಳಿಸದ ಸಂಜು, ನಂತರದ 5 ಎಸೆತಗಳಲ್ಲಿ ಸತತವಾಗಿ ಸಿಕ್ಸರ್ ಬಾರಿಸಿದರು. ಇದೇ ವೇಳೆ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್​ನ ಒಂದೇ ಓವರ್​ನಲ್ಲಿ ಎರಡನೇ ಗರಿಷ್ಠ ರನ್ ಪೇರಿಸಿದ ಭಾರತೀಯ ಬ್ಯಾಟರ್ ಎನಿಸಿದರು. ಯುವರಾಜ್ ಸಿಂಗ್ (36) ಮೊದಲಿಗರು.

ಇದನ್ನೂ ಓದಿ IND vs BAN : ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ಭಾರತದ 3-0 ಕ್ಲೀನ್‌ ಸ್ವೀಪ್‌ ಸಾಧನೆ

2ನೇ ವೇಗದ ಶತಕ

40 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಸಂಜು ಸ್ಯಾಮ್ಸನ್‌ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಜತೆಗೆ ಅತಿವೇಗದ ಶತಕ ಸಾಧಕ ಬಾರಿಸಿದ 2ನೇ ಭಾರತೀಯ ಎನಿಸಿಕೊಂಡರು. 2017ರಲ್ಲಿ ರೋಹಿತ್ ಶರ್ಮ 35 ಎಸೆತಗಳಲ್ಲೇ ಶತಕ ಸಿಡಿಸಿದ್ದು ದಾಖಲೆ. ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್-ಬ್ಯಾಟರ್.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ 6 ವಿಕೆಟ್​ಗೆ 297 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 7 ವಿಕೆಟ್​ಗೆ 164 ರನ್​ಗಳಿಸಲಷ್ಟೇ ಶಕ್ತಗೊಂಡಿತು. ಭಾರತ 133 ರನ್​ಗಳ ಬೃಹತ್ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಸಾಧನೆಗೈದಿತು.