Sunday, 15th December 2024

ಇಂಗ್ಲೆಂಡ್‌ಗೆ ಸೋಲು, ಕಿವೀಸ್‌ಗೆ ಸರಣಿ ಜಯ

ಎಡ್ಜ್ ಬಾಸ್ಟನ್: ಪ್ರವಾಸಿ ನ್ಯೂಜಿಲ್ಯಾಂಡ್ ತಂಡವು, ಇಂಗ್ಲೆಂಡ್‌ ತಂಡವನ್ನು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿಸಿದೆ. ಈ ಮೂಲಕ ನ್ಯೂಜಿಲೆಂಡ್‌ ೧೯೯೯ ರ ನಂತರ ಇಂಗ್ಲೆಂಡನಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದಂತಾಗಿದೆ.

ಇದರೊಂದಿಗೆ ನ್ಯೂಜಿಲ್ಯಾಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 85 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ರೂಟ್ ಬಳಗ ಕುಸಿತ ಕಂಡಿತು. 29 ರನ್ ಗಳಿಸಿದ ಮಾರ್ಕ್ ವುಡ್ ಅವರದ್ದೇ ಹೆಚ್ಚಿನ ಗಳಿಕೆ. ಕಿವೀಸ್ ಬೌಲರ್ ಗಳ ದಾಳಿಗೆ ಸಿಲುಕಿದ ಆಂಗ್ಲಾ ಆಟಗಾರರು ಕೇವಲ 122 ರನ್ ಗೆ ಆಲ್ ಔಟ್ ಆದರು.

ಒಲಿ ಪೋಪ್ 23 ರನ್, ಒಲಿ ಸ್ಟೋನ್ 15 ರನ್ ಮತ್ತು ಜಾಕ್ ಕ್ರಾವ್ಲಿ 17 ರನ್ ಗಳಿಸಿದರು. ಕಿವೀಸ್ ಪರ ಮ್ಯಾಟ್ ಹೆನ್ರಿ ಮತ್ತು ವಾಗ್ನರ್ ತಲಾ ಮೂರು ವಿಕೆಟ್ ಪಡೆದರೆ, ಬೌಲ್ಟ್ ಮತ್ತು ಅಜಾಜ್ ಪಟೇಲ್ ತಲಾ ಎರಡು ವಿಕೆಟ್ ಕಿತ್ತರು.

ಗೆಲುವಿಗೆ 42 ರನ್ ಗುರಿ ಪಡೆದ ಕಿವೀಸ್ ತಂಡ ಎರಡು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಹಂಗಾಮಿ ನಾಯಕ ಲ್ಯಾಂತಮ್ ಅಜೇಯ 23 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.ಎರಡು ಪಂದ್ಯಗಳ ಸರಣಿಯನ್ನು ಕಿವೀಸ್ 1-0 ಅಂತರದಿಂದ ತನ್ನದಾಗಿಸಿಕೊಂಡಿತು