ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಶಾನ್ ಮಾರ್ಷ್ ಅವರು ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಸದ್ಯ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಈ ಎಡಗೈ ಬ್ಯಾಟರ್, ಬುಧವಾರ ಸಿಡ್ನಿ ಥಂಡರ್ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದ್ದಾರೆ.
2008ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು, 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾದ ವಿರುದ್ಧ ಕೊನೆಯ ಅಂತರ ರಾಷ್ಟ್ರೀಯ ಪಂದ್ಯವನ್ನು ಓವಲ್‌ನಲ್ಲಿ ಆಡಿದ್ದರು. ಅವರು 38 ಟೆಸ್ಟ್ ಪಂದ್ಯಗಳಲ್ಲಿ 6 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 2265 ರನ್ ಗಳಿಸಿ ದ್ದಾರೆ. 73 ಏಕದಿನ ಪಂದ್ಯಗಳಲ್ಲಿ 7 ಶತಕ ಹಾಗೂ 15 ಅರ್ಧಶತಕಗಳ ಸಹಿತ 2,773 ರನ್ ಕಲೆ ಹಾಕಿದ್ದಾರೆ. ಅಲ್ಲದೆ, 15 ಟಿ20 ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಪ್ರತಿನಿಧಿಸಿದ್ದರು.
40 ವರ್ಷದ ಶಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಫ್ರಾಂಚೈಸಿ ಲೀಗ್ಗಳಲ್ಲಿ ಆಟ ಮುಂದುವರಿಸಿದ್ದರು.
2008ರ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಧಿಕ ರನ್ ಗಳಿಸಿ, ಆರೆಂಜ್ ಕ್ಯಾಪ್ ಪಡೆದ ದಾಖಲೆ ಶಾನ್ ಮಾರ್ಷ್ ಹೆಸರಿನಲ್ಲಿದೆ. ಅಂದು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ 11 ಪಂದ್ಯಗಳಲ್ಲಿ ಅವರು 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 616 ರನ್ ಗಳಿಸಿ ಮಿಂಚಿದ್ದರು.