Sunday, 15th December 2024

ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ದಾಖಲೆ ಅಳಿಸಿದ ಮುಹಮ್ಮದ್ ಸಿರಾಜ್

ಲಂಡನ್: ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ 39 ವರ್ಷ ಹಳೆಯದಾದ ದಾಖಲೆಯನ್ನು ಅಳಿಸಿದರು.

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ಸೋಮವಾರ ಕೊನೆಗೊಂಡ ಎರಡನೇ ಟೆಸ್ಟ್ ನಲ್ಲಿ ಹೈದರಾ ಬಾದ್ ಬೌಲರ್ ಸಾಧನೆ ಮಾಡಿದ್ದಾರೆ. ಲಾರ್ಡ್ಸ್‌ನಲ್ಲಿ ಭಾರತವು ಸೋಮವಾರ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಎರಡೂ ಇನ್ನಿಂಗ್ಸ್‌ಗಳಲ್ಲಿ ನಾಲ್ಕು ವಿಕೆಟ್ ಗಳ ಗೊಂಚಲು ಕಬಳಿಸುವ ಮೂಲಕ ಸಿರಾಜ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಎರಡನೇ ಟೆಸ್ಟ್ ನಲ್ಲಿ ಸಿರಾಜ್ 126 ರನ್ ನೀಡಿ ಒಟ್ಟು 8 ವಿಕೆಟ್ ಗಳನ್ನು ಕಬಳಿಸಿದರು. ಈ ಮೂಲಕ ಅವರು ಕಪಿಲ್ ಅವರ ಬೌಲಿಂಗ್ ದಾಖಲೆಯನ್ನು ಮೀರಿ ನಿಂತರು.

27 ರ ಹರೆಯದ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ 30 ಓವರ್ ಗಳಲ್ಲಿ 7 ಮೇಡನ್ ಸಹಿತ 94 ರನ್ ಗೆ 4 ವಿಕೆಟ್, ಎರಡನೇ ಇನ್ನಿಂಗ್ಸ್ ನಲ್ಲೂ 10.5 ಓವರ್ ಗಳಲ್ಲಿ 3 ಮೇಡನ್ ಸಹಿತ 32 ರನ್ ಗೆ 4 ವಿಕೆಟ್ ಗಳನ್ನು ಪಡೆದರು.

ಎರಡೂ ಇನ್ನಿಂಗ್ಸ್‌ಗಳಲ್ಲಿ ಇಂಗ್ಲೆಂಡ್‌ನ ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದಲ್ಲದೆ, ಸಿರಾಜ್ ಇಂಗ್ಲೆಂಡ್‌ನ ಬ್ಯಾಟಿಂಗ್‌ನಲ್ಲಿ ಸತತ ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿ ಗಮನ ಸೆಳೆದರು. ಮೊದಲ ಇನಿಂಗ್ಸ್‌ನಲ್ಲಿ, ಡೊಮಿನಿಕ್ ಸಿಬ್ಲಿ ಹಾಗೂ ಹಸೀಬ್ ಹಮೀದ್ ಅವರನ್ನು ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಮೊಯೀನ್ ಅಲಿ ಹಾಗೂ ಸ್ಯಾಮ್ ಕರ್ರನ್ ಅವರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್ ಗೆ ಅಟ್ಟಿದರು.

ಲಾರ್ಡ್ಸ್‌ನಲ್ಲಿ ಭಾರತದ ಬೌಲರ್ ಗಳ ಅತ್ಯುತ್ತಮ ಸಾಧನೆ

ಮುಹಮ್ಮದ್ ಸಿರಾಜ್ 8/126- 2021

ಕಪಿಲ್ ದೇವ್ 8/168 1982