Sunday, 8th September 2024

ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಂಡ ಶ್ರೀಲಂಕಾ

ಕೊಲಂಬೊ: ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ಟಿ-20 ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತವನ್ನು ಏಳು ವಿಕೆಟ್ ಗಳಿಂದ ಸೋಲಿಸಿದ ಆತಿಥೇಯ ಶ್ರೀಲಂಕಾ 2-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

ಬರ್ತ್‌ಡೇ ಬಾಯ್‌ ವನಿಂದು ಹಸರಂಗ ಅವರ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ, ಆತಿಥೇಯ ಶ್ರೀಲಂಕಾ ಎದುರಿನ ನಿರ್ಣಾಯಕ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಯಿತು. 12 ರನ್ ಗಳಿಸುವಷ್ಟರಲ್ಲಿ ಚಾಮೀರಾ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ವಿಕೆಟ್ ಪಡೆದರು. ನಂತರ ದೇವದತ್ತ ಪಡಿಕ್ಕಲ್ ಕೂಡಾ ಕೇವಲ 9 ರನ್ ಗಳಿಸುವಷ್ಟರಲ್ಲಿ ರನ್ ಔಟ್ ಆಗಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಧವನ್‌ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದ ಭಾರತದ ಮೊದಲ ನಾಯಕನೆನಿಸಿದರು.

ಋತುರಾಜ್ ಗಾಯಕ್ವಾಡ್ ಹಾಗೂ ಸಂಜು ಸ್ಯಾಮ್ಸನ್ ಹಸರಂಗ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂಗೆ ಬಲಿಯಾ ದರು. ಲೆಗ್‌ಸ್ಪಿನ್ನರ್‌ ವನಿಂದು ಹಸರಂಗ ಒಂದೇ ಓವರ್‌ನಲ್ಲಿ ಸ್ಯಾಮ್ಸನ್‌, ಗಾಯಕ್ವಾಡ್‌ ಅವರನ್ನು ಉರುಳಿಸಿ ಲಂಕೆಗೆ ಭರ್ಜರಿ ಮೇಲುಗೈ ಒದಗಿಸಿದರು. ನಂತರ ನಿತೀಶ್ ರಾಣಾ ಕೂಡಾ ಕೇವಲ 6 ರನ್ ಗಳಿಸಿ ಔಟಾ ದರು. ಬಳಿಕ ಭುವನೇಶ್ವರ್ ಕುಮಾರ್ 16, ರಾಹುಲ್ ಚಹಾರ್, 5, ಚೇತನ್ ಸಕಾರಿಯಾ 5 ರನ್ ಗಳಿಸಿದರು. ಇದರಿಂದಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಪರ ಅವಿಷ್ಕಾ ಫರ್ನಾಂಡೋ 12, ಮಿನೊದ್ ಭಾನುಕಾ 18, ಸದೀರಾ ಸಮರವಿಕ್ರಮ್ 6, ಧನಂಜಯ ಡಿಸಿಲ್ವಾ 23, ವಾನಿಂದು ಹಸರಂಗ 14 ರನ್ ಕಲೆಹಾಕುವುದರೊಂದಿಗೆ ಇನ್ನೂ 33 ಎಸೆತ ಬಾಕಿ ಇರುವಂತೆಯೇ ಏಳು ವಿಕೆಟ್ ಗಳಿಂದ ಶ್ರೀಲಂಕಾ ಗೆಲುವು ಸಾಧಿಸಿ, 2-1 ಅಂತರ ದೊಂದಿಗೆ ಸರಣಿಯನ್ನು ವಶಕ್ಕೆ ಪಡೆಯಿತು. ಭಾರತದ ಪರ ರಾಹುಲ್ ಚಹಾರ್(3-15)ಮೂರು ವಿಕೆಟ್ ಗಳನ್ನು ಪಡೆದರು.

ಅರ್ಧ ಹಾದಿ ಕ್ರಮಿಸುವಾಗ ಭಾರತ 39 ರನ್ನಿಗೆ 5 ವಿಕೆಟ್‌ ಉರುಳಿ ಸಿಕೊಂಡು ಪರದಾಡುತ್ತಿತ್ತು. ಬೌಲರ್‌ಗಳಾದ ಭುವನೇಶ್ವರ್‌ ಮತ್ತು ಕುಲದೀಪ್‌ ಆಗಲೇ ಕ್ರೀಸ್‌ ಇಳಿದಾಗಿತ್ತು. ಭುವನೇಶ್ವರ್‌ ಕುಮಾರ್‌ ಅತೀ ಹೆಚ್ಚು 32 ಎಸೆತ ಎದುರಿಸಿಯೂ ಬೌಂಡರಿ ಬಾರಿಸದ ಭಾರತದ ದಾಖಲೆಯೊಂದನ್ನು ಬರೆದರು (32 ಎಸೆತ, 16 ರನ್‌). ಅಜೇಯ 23 ರನ್‌ ಮಾಡಿದ ಕುಲದೀಪ್‌ ಭಾರತ ಸರದಿಯ ಗರಿಷ್ಠ ಸ್ಕೋರರ್‌.

ನಿರ್ಣಾಯಕ ಪಂದ್ಯಕ್ಕೆ ಭಾರತ ಒಂದು ಬದಲಾವಣೆ ಮಾಡಿಕೊಂಡಿತ್ತು. ಗಾಯಾಳು ನವದೀಪ್‌ ಸೈನಿ ಬದಲು ಸಂದೀಪ್‌ ವಾರಿಯರ್‌ ಅವರನ್ನು ಆಡಿಸಿತು. ಕೇರಳದ ಮಧ್ಯಮ ವೇಗಿ ವಾರಿಯರ್‌ ಭಾರತದ ಮೂಲ ತಂಡದಲ್ಲಿರಲಿಲ್ಲ. ತಂಡದ ಕೋವಿಡ್‌ ಕೇಸ್‌, ಐಸೊಲೇಶನ್‌ ಮೊದಲಾದ ಕಾರಣಗಳಿಂದ ಪ್ರಮುಖ ಆಟಗಾರರು ಲಭ್ಯರಾಗದ ಕಾರಣ ವಾರಿಯರ್‌ಗೆ ಅದೃಷ್ಟ ಖುಲಾಯಿಸಿತು.

 

Leave a Reply

Your email address will not be published. Required fields are marked *

error: Content is protected !!