Sunday, 24th November 2024

SL vs NZ: ನ್ಯೂಜಿಲ್ಯಾಂಡ್‌ ವಿರುದ್ಧ ಶ್ರೀಲಂಕಾ ಕ್ಲೀನ್‌ ಸ್ವೀಪ್‌ ಸಾಧನೆ

SL vs NZ

ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್‌(SL vs NZ) ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಇನಿಂಗ್ಸ್‌ ಹಾಗೂ 154 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್‌ ಮಾಡಿದ ಸಾಧನೆಗೈದಿದೆ. ಮೊದಲ ಪಂದ್ಯದಲ್ಲಿ ಕಿವೀಸ್‌ 63 ರನ್‌ಗಳ ಸೋಲು ಕಂಡಿತ್ತು.

ಗಾಲೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ಕಮಿಂಡು ಮೆಂಡಿಸ್‌ ಮತ್ತು ದಿನೇಶ್‌ ಚಂಡಿಮಾಲ್‌ ಅವರ ಶತಕದ ನೆರವಿನಿಂದ 5 ವಿಕೆಟ್‌ಗೆ 602 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿತ್ತು. ಭಾರೀ ಮೊತ್ತದ ಸವಾಲು ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ಮೊದಲ ಇನಿಂಗ್ಸ್‌ನಲ್ಲಿ 88 ರನ್ನಿಗೆ ಉದುರಿ ಫಾಲೋಆನ್‌ಗೆ ತುತ್ತಾಗಿತ್ತು. ಮಳೆಯಿಂದ ಶನಿವಾರದ ಆಟ ಬೇಗನೇ ಕೊನೆಗೊಂಡಾಗ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 199 ರನ್‌ ಗಳಿಸಿ 315 ರನ್‌ ಹಿನ್ನಡೆಯಲ್ಲಿತ್ತು.

ಇದನ್ನೂ ಓದಿ IND vs BAN: ಲಂಗೂರ್​ ಕಣ್ಗಾವಲಿನಲ್ಲಿ ಭಾರತ-ಬಾಂಗ್ಲಾ ಟೆಸ್ಟ್‌

ಅಂತಿಮ ದಿನವಾದ ಭಾನುವಾರ 5 ವಿಕೆಟಿಗೆ 199 ರನ್‌ಗಳಿಂದ ಆಟ ಮುಂದುವರಿಸಿದ ಕಿವೀಸ್‌ 360 ರನ್‌ಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ತುತ್ತಾಯಿತು. ಶನಿವಾರದ ಆಟವೊಂದರಲ್ಲೇ ನ್ಯೂಜಿಲ್ಯಾಂಡ್‌ 13 ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ 6 ವಿಕೆಟ್‌ ಉಡಾಯಿಸಿ ನ್ಯೂಜಿಲ್ಯಾಂಡ್‌ಗೆ ದುಃಸ್ವಪ್ನವಾಗಿ ಕಾಡಿದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ನಿಶಾನ್‌ ಪೈರಿಸ್‌ 6 ವಿಕೆಟ್‌ ಕಿತ್ತು ಆಘಾತ ನೀಡಿದರು.

ಮೊದಲ ಇನಿಂಗ್ಸ್‌ಗೆ ಹೋಲಿಸಿದರೆ ಕಿವೀಸ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಸಣ್ಣ ಪೈಪೋಟಿ ನೀಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಡೇವನ್‌ ಕಾನ್ವೇ (61), ಟಾಮ್‌ ಬ್ಲಂಡೆಲ್(60)‌ ಗ್ಲೆನ್‌ ಫಿಲಿಪ್ಸ್‌(78) ಮತ್ತು ಮಿಚೆಲ್‌ ಸ್ಯಾಂಟ್ನರ್‌ (67) ಅರ್ಧಶತಕ ಬಾರಿಸಿದರು. ಕೇನ್‌ ವಿಲಿಯಮ್ಸನ್‌ (46) ರನ್‌ ಗಳಿಸಿದರು.

6ನೇ ವಿಕೆಟಿಗೆ ಜತೆಗೂಡಿದ ಟಾಮ್‌ ಬ್ಲಿಂಡೆಲ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಈ ಜೋಡಿ 95 ರನ್‌ಗಳ ಜತೆಯಾಟ ನಡೆಸಿತು. 7ನೇ ವಿಕೆಟ್‌ಗೆ ಆಡಲಿಳಿದ ಸ್ಯಾಂಟ್ನರ್‌ ಕೂಡ ಶಕ್ತಿ ಮೀರಿದ ಬ್ಯಾಟಿಂಗ್‌ ನಡೆಸಿ ತಂಡವನ್ನು ಸೋಲಿನಿಂದ ಪಾರು ಮಾಡುವ ಪ್ರಯತ್ನ ನಡೆಸಿದರು. ಅರ್ಧಶತಕ ಪೂರ್ತಿಗೊಂಡ ಬಳಿಕ ಇವರ ವಿಕೆಟ್‌ ಕೂಡ ಪತನಗೊಂಡಿತು. ಈ ವಿಕೆಟ್‌ ಬೀಳುತ್ತಿದ್ದಂತೆ ಕಿವೀಸ್‌ ಸೋಲು ಕೂಡ ಖಚಿತಗೊಂಡಿತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ-5 ವಿಕೆಟಿಗೆ 602 ಡಿಕ್ಲೇರ್‌.( ಕಮಿಂಡು ಮೆಂಡಿಸ್‌-ಅಜೇಯ 182, ದಿನೇಶ್‌ ಚಂಡಿಮಾಲ್‌ 116). ನ್ಯೂಜಿಲ್ಯಾಂಡ್‌- ಮೊದಲ ಇನಿಂಗ್ಸ್‌: 88ಕ್ಕೆ ಆಲೌಟ್‌. (ಸ್ಯಾಂಟ್ನರ್‌ 29, ಮಿಚೆಲ್‌ 23, ಜಯಸೂರ್ಯ 42ಕ್ಕೆ 6, ನಿಶಾನ್‌ ಪೈರಿಸ್‌ 33ಕ್ಕೆ 3). ನ್ಯೂಜಿಲ್ಯಾಂಡ್‌ ದ್ವಿತೀಯ ಇನಿಂಗ್ಸ್‌: 360 ಆಲೌಟ್‌. (ಕಾನ್ವೇ 61, ವಿಲಿಯಮ್ಸನ್‌ 46, ಬ್ಲಿಂಡೆಲ್‌ 60, ಫಿಲಿಪ್ಸ್‌ 78, ಸ್ಯಾಂಟ್ನರ್‌ 67, ಪೈರಿಸ್‌ 170 ಕ್ಕೆ 6, ಜಯಸೂರ್ಯ 139ಕ್ಕೆ 3).