Sunday, 24th November 2024

SL vs NZ: ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಿಂದ ವಾನಿಂದು ಹಸರಂಗ ಔಟ್‌!

Wanindu Hasaranga ruled out of New Zealand ODIs with hamstring injury

ನವದೆಹಲಿ: ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾ ತಂಡದ (SL vs NZ) ಸ್ಪಿನ್‌ ಆಲ್‌ರೌಂಡರ್‌ ವಾನಿಂದು ಹಸರಂಗ ಅವರು ನ್ಯೂಜಿಲೆಂಡ್‌ ವಿರುದ್ಧದ ಮುಂಬರುವ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ನವೆಂಬರ್‌ 10 ರಂದು ಭಾನುವಾರ ಎರಡನೇ ಟಿ20ಐ ಪಂದ್ಯದಲ್ಲಿ ವಾನಿಂದು ಹಸರಂಗ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಬೌಲಿಂಗ್‌ ವೇಳೆ ಅವರಿಂದ ರನ್‌ಅಪ್‌ ಮಾಡಲು ಸಾಧ್ಯವಾಗಿರಲಿಲ್ಲ.

ಕಿವೀಸ್‌ ಎದುರಿನ ಟಿ20ಐ ಸರಣಿಯ ಎರಡು ಪಂದ್ಯಗಳಿಂದ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎನಿಸಿಕೊಂಡಿದ್ದರು. ಎರಡನೇ ಟಿ20ಐ ಪಂದ್ಯದಲ್ಲಿ ವಾನಿಂದು ಹಸರಂಗ ಅವರು, 4 ಓವರ್‌ ಬೌಲ್‌ ಮಾಡಿ ಕೇವಲ 17 ರನ್‌ ನೀಡಿ ವಿಲ್‌ ಯಂಗ್‌, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಜಾಶ ಕ್ಲಾರ್ಕ್‌ಸನ್‌ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು ಮೊದಲನೇ ಪಂದ್ಯದಲ್ಲಿ ಎರಡು ವಿಕೆಟ್‌ಗಳುಯ ಹಾಗೂ 23 ಎಸೆತಗಳಲ್ಲಿ 22 ರನ್‌ಗಳನ್ನು ಗಳಿಸಿದ್ದರು.

ವಾನಿಂದು ಹಸರಂಗ ಸ್ಥಾನಕ್ಕೆ ದುಶನ್‌ ಹೇಮಂತ

ಮುಂಬರುವ ಏಕದಿನ ಸರಣಿಯಲ್ಲಿ ಗಾಯಾಳು ವಾನಿಂದು ಹಸರಂಗ ಅವರ ಸ್ಥಾನಕ್ಕೆ ದುಶನ್‌ ಹೇಮಂತ ಸೇರ್ಪಡೆಯಾಗಿದ್ದಾರೆ. ಇಲ್ಲಿಯತನಕ ಆಡಿದ ಐದು ಏಕದಿನ ಪಂದ್ಯಗಳಿಂದ 30ರ ಪ್ರಾಯದ ಹೇಮಂತ ಅವರು ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಶ್ರೀಲಂಕಾ ಎ ತಂಡದ ಪರ ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ.

ನವೆಂಬರ್‌ 13 ರಂದು ಬುಧವಾರ ರಣಗಿರಿ ದಂಬುಲ್ಲಾ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದೆ. ಇನ್ನುಳಿದ ಎರಡು ಪಂದ್ಯಗಳು ಪಲ್ಲೆಕೆಲೆಯಲ್ಲಿ ಕ್ರಮವಾಗಿ ನವೆಂಬರ್‌ 17 ಮತ್ತು 19 ರಂದು ನಡೆಯಲಿದೆ.

ಏಕದಿನ ಸರಣಿಯಿಂದ ಲಾಕಿ ಫರ್ಗ್ಯೂಸನ್‌ ಔಟ್‌

ಈ ಹಿಂದೆ ನ್ಯೂಜಿಲೆಂಡ್‌ ತಂಡದ ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್‌ ಅವರು ಕೂಡ ಗಾಯದ ಕಾರಣ ಏಕದಿನ ಸರಣಿಯಿಂದ ಹೊರ ನಡೆದಿದ್ದರು. ಟಿ20ಐ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಐದನೇ ನ್ಯೂಜಿಲೆಂಡ್‌ ಬೌಲರ್‌ ಆಗಿದ್ದಾರೆ. ಮೊದಲನೇ ಟಿ20ಐ ಪಂದ್ಯದಲ್ಲಿ ಶ್ರೀಲಂಕಾ ತಂಡ 4 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು ಹಾಗೂ ಚರಿತ ಅಸಲಂಕ ಅಜೇಯ 35 ರನ್‌ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಎರಡನೇ ಪಂದ್ಯದಲ್ಲಿ ಲಾಕಿ ಫರ್ಗ್ಯೂಸನ್‌ ಹ್ಯಾಟ್ರಿಕ್‌ ವಿಕೆಟ್‌ ಸಹಾಯದಿಂದ ಕಿವೀಸ್‌ 5 ವಿಕೆಟ್‌ ಗೆಲುವು ಪಡೆದಿತ್ತು.

ಕಿವೀಸ್‌-ಶ್ರೀಲಂಕಾ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ

ಮೊದಲನೇ ಏಕದಿನ ಪಂದ್ಯ: ನವೆಂಬರ್‌ 13, ರಣಗಿರಿ ದಂಬುಲ್ಲಾ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ದಂಬುಲಾ
ಎರಡನೇ ಏಕದಿನ ಪಂದ್ಯ: ನವೆಂಬರ್‌ 17, ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ಪಲ್ಲೆಕೆಲೆ
ಮೂರನೇ ಏಕದಿನ ಪಂದ್ಯ: ನವೆಂಬರ್‌ 19, ಪಲ್ಲೆಕೆಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ಪಲ್ಲೆಕೆಲೆ

ಈ ಸುದ್ದಿಯನ್ನು ಕೂಡ ಓದಿ: SL vs NZ: ನ್ಯೂಜಿಲ್ಯಾಂಡ್‌ ವಿರುದ್ಧ ಶ್ರೀಲಂಕಾ ಕ್ಲೀನ್‌ ಸ್ವೀಪ್‌ ಸಾಧನೆ