Thursday, 21st November 2024

SMAT 2024: ಸಹೋದರ ಕೃನಾಲ್ ನಾಯಕತ್ವದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕೆ

ಅಹಮದಾಬಾದ್‌: ಮುಂದಿನ ವಾರದಿಂದ ಆರಂಭವಾಗಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ (SMAT 2024) ಕೂಟಕ್ಕೆ ಬರೋಡಾ ತಂಡ ಪ್ರಕಟವಾಗಿದೆ. ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಕೂಡ ತಂಡದಲ್ಲಿದ್ದು ಅವರ ಹಿರಿಯ ಸಹೋದರ ಕೃನಾಲ್ ಪಾಂಡ್ಯ(Krunal Pandya) ತಂಡಕ್ಕೆ ನಾಯಕನಾಗಿದ್ದಾರೆ. ಐಪಿಎಲ್ 2024 ರ ಮೆಗಾ ಹರಾಜು ನಡೆಯುವ ಒಂದು ದಿನ ಮೊದಲು(ನವೆಂಬರ್ 23) ಮುಷ್ತಾಕ್‌ ಅಲಿ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಹೀಗಾಗಿ ಹರಾಜಿನಲ್ಲಿರುವ ದೇಶೀಯ ಆಟಗಾರರು ತಮ್ಮ ಉತ್ಕೃಷ್ಟಮಟ್ಟದ ಆಟ ಪ್ರದರ್ಶಿಸಿ ಹರಾಜಿಗೂ ಮುನ್ನ ಗಮನಸೆಳೆಯುವ ಪ್ರಯತ್ನ ಮಾಡಬಹುದು.

ಸುದೀರ್ಘ ಕಾಲದ ಬಳಿಕ ಹಾರ್ದಿಕ್ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ. 2018-19 ರ ರಣಜಿ ಟ್ರೋಫಿ ಋತುವಿನಲ್ಲಿ ಅವರು ಬರೋಡ ತಂಡದ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಪಾಂಡ್ಯ ಕೊನೆಯ ಬಾರಿಗೆ ಆಡಿದ್ದು ಜನವರಿ 2016ರಲ್ಲಿ. ಅದು ಉತ್ತರ ಪ್ರದೇಶ ವಿರುದ್ಧ ಫೈನಲ್‌ ಪಂದ್ಯವಾಗಿತ್ತು. ಫೈನಲ್‌ನಲ್ಲಿ ಬರೋಡಾ ಸೋಲು ಕಂಡು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ SMAT 2024: ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್‌ ನಾಯಕ

ಕೃನಾಲ್ ನೇತೃತ್ವದ ಬರೋಡಾ ತಂಡ ಕಳೆದ ಆವೃತ್ತಿಯಲ್ಲಿ ಫೈನಲ್‌ ತಲುಪಿತ್ತು. ಆದರೆ ಫೈನಲ್‌ನಲ್ಲಿ ಪಂಜಾಬ್‌ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಅನುಭವಿ ಹಾಗೂ ಪಂದ್ಯದ ಗತಿಯನ್ನೇ ಬದಲಿಸುವ ಹಾರ್ದಿಕ್‌ ಪಾಂಡ್ಯ ಇರುವುದು ತಂಡದ ಬಲ ಹೆಚ್ಚಿದೆ. ಬರೋಡಾ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಈ ಗುಂಪಿನಲ್ಲಿ ಗುಜರಾತ್, ಸೌರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಕಾಣಿಸಿಕೊಂಡಿದೆ.

ಶ್ರೇಯಸ್ ಅಯ್ಯರ್ ಮುಂಬೈ(Mumbai) ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್‌ಗೆ(Shreyas Iyer) ಈ ಟೂರ್ನಿ ಪ್ರಮುಖವಾಗಿದೆ.

ರಣಜಿ ಟೂರ್ನಿಯಲ್ಲಿ ಅಯ್ಯರ್ ಒಡಿಶಾ ವಿರುದ್ಧ ದ್ವಿಶತಕ ಬಾರಿಸಿ ಮಿಂಚಿದ್ದರು. ಫಿಟ್‌ನೆಸ್‌ ಮತ್ತು ಫಾರ್ಮ್‌ ಕಳೆದುಕೊಂಡು ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೂಡ ತಂಡದಲ್ಲಿದ್ದಾರೆ. ಅನುಭವಿ ಆಟಗಾರ ರಣಜಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.