Sunday, 15th December 2024

SMAT Final 2024: ಚಾಂಪಿಯನ್‌ ಪಟ್ಟ ಅಲಂಕರಿಸಿದ ಮುಂಬೈ

ಬೆಂಗಳೂರು: ಸೂರ್ಯಾಂಶ್‌ ಶೆಡ್ಗೆ(36*) ಮತ್ತು ಸೂರ್ಯಕುಮಾರ್‌ ಯಾದವ್‌(48) ಅವರ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ(SMAT Final 2024) ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡ ಮಧ್ಯಪ್ರದೇಶ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. 13 ವರ್ಷದ ಬಳಿಕ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ ಮತ್ತೆ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಇದು ಮುಂಬೈ ತಂಡಕ್ಕೆ ಒಲಿದ 2ನೇ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ. ಇದಕ್ಕೂ ಮುನ್ನ 2022-23ರ ಸಾಲಿನ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮಧ್ಯಪ್ರದೇಶ, ನಾಯಕ ರಜತ್‌ ಪಾಟಿದಾರ್‌ ಸಿಡಿಸಿದ ಬಿರುಸಿನ ಅರ್ಧ ಶತಕದ ನೆರವಿನಿಂದ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 174 ರನ್‌ ಬಾರಿಸಿತು. ಜವಾಬಿತ್ತ ಮುಂಬೈ ತಂಡ 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ವೇಳೆ ಅಜಿಂಕ್ಯ ರಹಾನೆ 37, ಸೂರ್ಯಕುಮಾರ್‌ ಯಾದವ್‌ 48 ರನ್‌ ಬಾರಿಸಿದರೆ, ಅಂತಿಮ ಹಂತದಲ್ಲಿ ಸೂರ್ಯಾಂಶ್‌ ಶೆಡ್ಗೆ ಸಿಡಿದು ನಿಂತು 15 ಎಸೆತದಿಂದ ಅಜೇಯ 36 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಈ ಬಿರುಸಿನ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ ತಲಾ 3 ಸಿಕ್ಸರ್‌ ಮತ್ತು ಬೌಂಡರಿ ದಾಖಲಾಯಿತು. ರಹಾನೆ ಮತ್ತು ಸೂರ್ಯ ಮೂರನೇ ವಿಕೆಟ್‌ಗೆ 46 ರನ್‌ ಜತೆಯಾಟ ನಡೆಸಿದರು. ಅಥರ್ವ ಅಂಕೋಲೇಕರ್ 6 ಎಸೆತಗಳಿಂದ ಅಜೇಯ 16 ರನ್‌ ಬಾರಿಸಿದರು.

ಇದನ್ನೂ ಓದಿ WPL Auction 2025: ಗರಿಷ್ಠ ಮೊತ್ತ ಪಡೆದ ಸಿಮ್ರಾನ್ ಶೇಖ್; ರಾಜ್ಯದ ಓರ್ವ ಆಟಗಾರ್ತಿಗೆ ಮಣೆ

ಮೊದಲು ಬ್ಯಾಟಿಂಗ್‌ ನಡೆಸಿದ ಮಧ್ಯಪ್ರದೇಶ ಈ ಪಂದ್ಯದಲ್ಲಿಯೂ ಆರಂಭಿಕ ವೈಫಲ್ಯ ಕಂಡಿತು. 6 ರನ್‌ ಆಗುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಾದೂರ್ಲ್‌ ಠಾಕೂರ್‌ ಮೊದಲ ಓವರ್‌ನಲ್ಲೇ ಅವಳಿ ಆಘಾತವಿಕ್ಕಿ ಅರ್ಪಿತ್ ಗೌಡ್(3) ಮತ್ತು ಹರ್ಷ ಗಾವ್ಲಿ(2) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಆ ಬಳಿಕ ಬಂದ ಸುಭ್ರಾಂಶು ಸೇನಾಪತಿ(23) ಮತ್ತು ಹರ್‌ಪ್ರೀತ್ ಸಿಂಗ್(15) ಕೆಲ ಕಾಲ ತಾಳ್ಮೆಯುತ ಬ್ಯಾಟಿಂಗ್‌ ನಡೆಸಿದರೂ ಇವರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

ಪಾಟಿದಾರ್‌ ಏಕಾಂಗಿ ಹೋರಾಟ

54 ರನ್‌ಗೆ ಪ್ರಮುಖ ನಾಲ್ಕು ವಿಕೆಟ್‌ ಬಿದ್ದಾಗ ಬ್ಯಾಟಿಂಗ್‌ಗೆ ಇಳಿದ ರಜತ್‌ ಪಾಟಿದಾರ್‌ ಏಕಾಂಗಿಯಾಗಿ ಹೋರಾಟ ನಡೆಸಿ ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತ ಪಾಟಿದಾರ್‌ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ತಲಾ 6 ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ಅಜೇಯ 81 ರನ್‌ ಸಿಡಿಸಿದರು. ಎದುರಿಸಿದ್ದು ಕೇವಲ 40 ಎಸೆತ. ಡೆಲ್ಲಿ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿಯೂ ಅವರು ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಐಪಿಎಲ್‌ನಲ್ಲಿ ಕೆಕೆಆರ್‌ ಪರ ಸ್ಫೋಟಕ ಬ್ಯಾಟಿಂಗ್‌ ಮೂಲಕ ಸದ್ದು ಮಾಡಿದ್ದ ವೆಂಟಕೇಶ್‌ ಅಯ್ಯರ್‌ ಕೇವಲ ಒಂದು ಬೌಂಡರಿ ಮತ್ತು ಸಿಕ್ಸರ್‌ಗೆ ಸೀಮಿತರಾಗಿ 17 ರನ್‌ ಗಳಿಸಿ ಬ್ಯಾಟಿಂಗ್‌ ವೈಫಲ್ಯ ಎದುರಿಸಿದರು. ಇವರು ಸಿಡುದು ನಿಲ್ಲುತ್ತಿದ್ದರೆ ತಂಡ 200‌ ರ ಗಡಿ ದಾಟಬಹುದಿತ್ತು. ಮುಂಬೈ ಪರ ಶಾರ್ದೂಲ್‌ ಠಾಕೂರ್‌ ಮತ್ತು ರಾಯ್ಸ್ಟನ್ ಡಯಾಸ್ ತಲಾ 2 ವಿಕೆಟ್‌ ಕಿತ್ತರು. ಉಳಿದಂತೆ ಶಿವಂ ದುಬೆ, ಅಥರ್ವ ಅಂಕೋಲೇಕರ್ ಮತ್ತು ಸೂರ್ಯಾಂಶ್ ಶೆಡ್ಗೆ ತಲಾ ಒಂದು ವಿಕೆಟ್‌ ಕಲೆ ಹಾಕಿದರು.

ಸಂಕ್ಷಿಪ್ತ ಸ್ಕೋರ್‌

ಮಧ್ಯಪ್ರದೇಶ: 8 ವಿಕೆಟ್‌ಗೆ 174(ರಜತ್‌ ಪಾಟಿದಾರ್‌ ಅಜೇಯ 81, ಸುಭ್ರಾಂಶು ಸೇನಾಪತಿ 23, ರಾಯ್ಸ್ಟನ್ ಡಯಾಸ್ 32 ಕ್ಕೆ 2, ಶಾರ್ದೂಲ್‌ ಠಾಕೂರ್‌ 41 ಕ್ಕೆ 2. ಮುಂಬೈ: ಅಜಿಂಕ್ಯ ರಹಾನೆ 37, ಸೂರ್ಯಕುಮಾರ್‌ 48, ಸೂರ್ಯಾಂಶ್‌ ಶೆಡ್ಗೆ 36*, ತ್ರಿಪುರೇಶ್ ಸಿಂಗ್ 34 ಕ್ಕೆ 2.