ಸಿಡ್ನಿ: ಭಾರತ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಅಮೋಘ ಶತಕದ (131) ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ವಿಕೆಟ್ ನಷ್ಟವಿಲ್ಲದೆ 26 ಗಳಿಸಿದೆ.
ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಷೇನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಕಾಡಿ ದರು. ಸ್ಮಿತ್ ಆಕರ್ಷಕ ಶತಕ ಸಾಧನೆ ಮಾಡಿದರೆ ಲಾಬುಷೇನ್ ಕೇವಲ 9 ರನ್ ಅಂತರದಿಂದ ಶತಕ ವಂಚಿತರಾದರು.
166ಕ್ಕೆ 2 ಎಂಬ ಸ್ಕೋರ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಆಸೀಸ್‌ಗೆ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ನೆರವಾದರು. ಈ ನಡುವೆ ಶತಕದ ಅಂಚಿನಲ್ಲಿ ಲಾಬುಷೇನ್ ಎಡವಿ ಬಿದ್ದರು. 196 ಎಸೆತಗಳನ್ನು ಎದುರಿಸಿದ ಲಾಬುಷೇನ್ 11 ಬೌಂಡರಿಗಳ ನೆರವಿನಿಂದ 91 ರನ್ ಗಳಿಸಿದರು. ಈ ವಿಕೆಟ್ ರವೀಂದ್ರ ಜಡೇಜ ಪಾಲಾಯಿತು.
ಬಳಿಕ ಕ್ರೀಸಿಗಿಳಿದ ಮ್ಯಾಥ್ಯೂ ವೇಡ್ (13) ಅವರನ್ನು ಔಟ್ ಮಾಡಿದ ಜಡೇಜ ಪರಿಣಾಮಕಾರಿ ಎನಿಸಿಕೊಂಡರು.
ಕ್ಯಾಮರಾನ್ ಗ್ರೀನ್ (0) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಜಸ್‌ಪ್ರೀತ್ ಬೂಮ್ರಾ, ಆಸೀಸ್‌ಗೆ ಮಗದೊಂದು ಆಘಾತ ನೀಡಿದರು. ಊಟದ ವಿರಾಮದ ಹೊತ್ತಿಗೆ ಆಸೀಸ್ ಐದು ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು. ಭೋಜನ ವಿರಾಮದ ಬಳಿಕ ವಿಕೆಟ್‌ನ ಒಂದು ತುದಿಯಿಂದ ನೆಲಕಚ್ಚಿ ನಿಂತ ಸ್ಮಿತ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಅಲ್ಲದೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಎಂಟನೇ ಶತಕ ಸಾಧನೆ ಮಾಡಿದರು.
ರವೀಂದ್ರ ಜಡೇಜ ಕೈಚಳಕದ ನೆರವಿನಿಂದ ಆತಿಥೇಯರಿಗೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಯಿತು. ಅಂತಿಮವಾಗಿ ಸ್ಮಿತ್ ರನೌಟ್ ಆಗುವುದರೊಂದಿಗೆ ಆಸೀಸ್ 105.4 ಓವರ್‌ಗಳಲ್ಲಿ 338 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಸ್ಮಿತ್ ರನೌಟ್ ಮಾಡುವುದರಲ್ಲೂ ಜಡೇಜಾ ಕೈಚಳಕ ಮೆರೆದರು. ಜೋಶ್ ಹ್ಯಾಜಲ್‌ವುಡ್ (1*) ಅಜೇಯರಾಗುಳಿದರು.
ಭಾರತದ ಪರ ನಾಲ್ಕು ವಿಕೆಟ್ ಕಬಳಿಸಿದ ರವೀಂದ್ರ ಜಡೇಜ ಮಿಂಚಿದರು. ಜಸ್‌ಪ್ರೀತ್ ಬೂಮ್ರಾ ಹಾಗೂ ಪದಾರ್ಪಣಾ ವೇಗಿ ನವದೀಪ್ ಸೈನಿ ತಲಾ ಎರಡು ವಿಕೆಟ್ ಹಂಚಿಕೊಂಡರು. ಇನ್ನೊಂದು ವಿಕೆಟ್ ಮೊಹಮ್ಮದ್ ಸಿರಾಜ್ ಪಾಲಾಯಿತು.