ಮುಂಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ‘ರನ್ ಮೆಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ ತೀವ್ರ ಒತ್ತಡದಲ್ಲಿದ್ದು, ಅವರಿಗೆ ತಂಡದ ಸಹ ಆಟಗಾರರು ನೆರವಾಗಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್‌ನಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ಆರ್‌ಸಿಬಿಯ ಕಳಪೆ ಪ್ರದರ್ಶನ ಈ ಬಾರಿಯೂ ಮುಂದುವರಿದಿದೆ. ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಏಕಾಂಗಿ ಹೋರಾಟ ನಡೆಸುತ್ತಿರುವ ಕೊಹ್ಲಿ ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ 67.66ರ ಸರಾಸರಿಯಲ್ಲಿ 203 ರನ್ ಗಳಿಸಿದ್ದಾರೆ. ಆದರೆ ಆರ್‌ಸಿಬಿಯ ಇತರೆ ಆಟಗಾರರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ನಾಯಕ ಫಫ್ ಡುಪ್ಲೆಸಿ, ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಸತತ ವೈಫಲ್ಯವನ್ನು ಕಂಡಿದ್ದಾರೆ.
‘ವಿರಾಟ್ ಜೊತೆ ಇತರೆ ಪ್ರಮುಖ ಬ್ಯಾಟರ್‌ಗಳು ಜವಾಬ್ದಾರಿ ವಹಿಸಬೇಕಿದೆ. ಇತರೆ ಬ್ಯಾಟರ್‌ಗಳ ವೈಫಲ್ಯವು ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಹಾಗಾಗಿ ಸಹ ಆಟಗಾರರು ವಿರಾಟ್‌ಗೆ ನೆರವಾಗಬೇಕಿದೆ’ ಎಂದು ಹೇಳಿದ್ದಾರೆ.
‘ವಿರಾಟ್ ಕೊಹ್ಲಿ ಅದ್ಭುತ ಆಟಗಾರ. ವಿಶ್ವದರ್ಜೆಯ ಬ್ಯಾಟರ್. ಪರಿಸ್ಥಿತಿಗೆ ತಕ್ಕಂತೆ ಆಡುತ್ತಾರೆ. ವೇಗವಾಗಿ ರನ್ ಗಳಿಸುವ ಅಗತ್ಯವಿದ್ದರೆ ಅದನ್ನು ಮಾಡುತ್ತಾರೆ. ಪ್ರತಿ ಸಲವೂ 180ರ ಸ್ಟೈಕ್‌ರೇಟ್‌ನಲ್ಲಿ ರನ್ ಗಳಿಸುವ ಅಗತ್ಯವಿಲ್ಲ’ ಎಂದು ಹೇಳಿದರು.