Wednesday, 23rd October 2024

Gautam Gambhir : ಸೋಶಿಯಲ್ ಮೀಡಿಯಾ ನೋಡಿ ತಂಡ ರಚಿಸುವುದಿಲ್ಲ; ಗಂಭೀರ್ ಈ ರೀತಿ ಹೇಳಿದ್ದುಯಾಕೆ?

Social Gambhir

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳಿಂದ ಸೋತಿದೆ. ಸರಣಿಯಲ್ಲಿ ಪ್ರವಾಸಿ ತಂಡ 0-1 ಮುನ್ನಡೆಯಲ್ಲಿದೆ. ಸರಣಿಯನ್ನು ಉಳಿಸಿಕೊಳ್ಳಲು ಪುಣೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಬಲ್ಲಿ ಆತಿಥೇಯರು ಗೆಲ್ಲಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದಂದು, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲಿ ಅವರು ತಂಡದ ಸಂಯೋಜನೆಯ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಕೆಎಲ್ ರಾಹುಲ್ ಬದಲಿಗೆ ಸರ್ಫರಾಜ್ ಖಾನ್ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಊಹಾಪೋಹಗಳು ಹರಡಿವೆ, ಶುಬ್ಮನ್ ಗಿಲ್ ಕುತ್ತಿಗೆ ಗಾಯದಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಗಿಲ್ ಅವರ ಗಾಯವು ಬೆಂಗಳೂರು ಟೆಸ್ಟ್‌ನಲ್ಲಿ ಸರ್ಫರಾಜ್ ಆಯ್ಕೆಗೆ ದಾರಿ ಮಾಡಿಕೊಟ್ಟಿತು. ಮುಂಬೈ ಬ್ಯಾಟರ್ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು, ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರೂ ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಶತಕ (150) ಪೂರೈಸಿದ್ದರು.

ಮತ್ತೊಂದೆಡೆ ರಾಹುಲ್ ತವರು ಪಿಚ್‌ ಬೆಂಗಳೂರಿನಲ್ಲಿ ಹೆಣಗಾಡಿದರು, ಎರಡು ಇನಿಂಗ್ಸ್‌ನಲ್ಲಿ ಕ್ರಮವಾಗಿ 0 ಮತ್ತು 12 ರನ್ ಬಾರಿಸಿದರು. ಆದಾಗ್ಯೂ ಗಂಭೀರ್ ಅವರು ರಾಹುಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್‌ ಅಭಿಪ್ರಾಯ ಮುಖ್ಯ ಎಂದು ಹೇಳಿದ್ದಾರೆ. ಇದೇ ವೇಳೆ ಸೋಶಿಯಲ್ ಮಿಡಿಯಾದ ಅಭಿಪ್ರಾಯ ಕೇಳಿ ತಂಡ ರಚನೆ ಮಾಡಲಾಗುವುದಿಲ್ಲ ಎಂದಿದ್ದಾರೆ.

ಸೋಶಿಯಲ್‌ ಮೀಡಿಯಾದ ಧ್ವನಿಗೆ ಬಲವಿಲ್ಲ

ಸೋಷಿಯಲ್ ಮೀಡಿಯಾ ಮುಖ್ಯವಲ್ಲ. ತಂಡದ ನಿರ್ವಹಣೆ ಮತ್ತು ನಾಯಕತ್ವದ ಗುಂಪು ಏನು ಯೋಚಿಸುತ್ತದೆ ಎಂಬುದು ಬಹಳ ಮುಖ್ಯ. ರಾಹುಲ್‌ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಕಾನ್ಪುರದಲ್ಲಿ (ಬಾಂಗ್ಲಾದೇಶದ ವಿರುದ್ಧ) ಕಠಿಣ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಗಂಭೀರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Rishabh Pant : ನ್ಯೂಜಿಲ್ಯಾಂಡ್‌ ಸರಣಿಗೆ ಮೊದಲು ಗಲ್ಲಿ ಕ್ರಿಕೆಟ್‌ ಆಡಿದ ರಿಷಭ್ ಪಂತ್‌

ಅವರು ದೊಡ್ಡ ರನ್ ಗಳಿಸಬೇಕು ಮತ್ತು ಅವರು ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರಿಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ. ಅದಕ್ಕಾಗಿಯೇ ಅವರನ್ನು ತಂಡವು ಬೆಂಬಲಿಸಿದೆ,” ಎಂದು ಅವರು ಹೇಳಿದರು.

“ಕ್ರಿಕೆಟ್, ಕ್ರೀಡೆಗಳು ಒಂದು ದೊಡ್ಡ ಸಮತೋಲನದ ಪ್ರಕ್ರಿಯೆ. ಕಾನ್ಪುರದಲ್ಲಿ ಎರಡು ದಿನದಲ್ಲಿ ಪಂದ್ಯ ಗೆದ್ದಿದ್ದೇವೆ. ಬೆಂಗಳೂರಿನಲ್ಲಿ ಸೋಲಾಗಿದೆ. ಎರಡನ್ನೂ ಪರಿಗಣಿಸಬೇಕಾಗಿದೆ , “ಎಂದು ಗಂಭೀರ್ ಹೇಳಿದ್ದಾರೆ.