Thursday, 12th December 2024

ದ.ಆಫ್ರಿಕಾ ಮಹಿಳಾ ವಿಕೆಟ್‌ಕೀಪರ್-ಬ್ಯಾಟರ್ ತ್ರಿಶಾ ಚೆಟ್ಟಿ ನಿವೃತ್ತಿ

ಜೋಹಾನ್ಸ್’ಬರ್ಗ್: ಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ತ್ರಿಶಾ ಚೆಟ್ಟಿ ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

34 ವರ್ಷದ ಕ್ರಿಕೆಟರ್ ತ್ರಿಶಾ ಚೆಟ್ಟಿ ನಿರಂತರವಾಗಿ ಬೆನ್ನುನೋವಿನಿಂದ ಬಳಲುತ್ತಿದ್ದರು. ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಅವರು ವಿದಾಯ ಹೇಳಿದರು.

ಕ್ರಿಕೆಟ್ ವೃತ್ತಿಜೀವನವು ನನ್ನ ಜೀವನವನ್ನು ಬದಲಾಯಿಸಿದ ಅನುಭವವಾಗಿದೆ ಎಂದು ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ್ತಿ ತ್ರಿಶಾ ಚೆಟ್ಟಿ ಮನದಾಳ ವ್ಯಕ್ತಪಡಿಸಿದ್ದಾರೆ.

“ನಾನು ಪೂರ್ಣ ಮನಸ್ಸಿನಿಂದ ಹಿಂತಿರುಗಿ ನೋಡಿದರೆ, ಕ್ರಿಕೆಟ್ ನನಗೆ ಜೀವನ, ಶಿಸ್ತು, ವೃತ್ತಿಪರ ಮತ್ತು ತಂಡದ ಆಟಗಾರ್ತಿಯಾಗಿರುವುದು ಹೇಗೆ ಎಂದು ಕಲಿಸಿದೆ. ಇದಕ್ಕಾಗಿ ನಾನು ಯಾವಾಗಲೂ ಕ್ರಿಕೆಟ್‌ಗೆ ಕೃತಜ್ಞಳಾಗಿರುತ್ತೇನೆ. ನಾನು ನಿವೃತ್ತಿಯ ನಂತರದ ನನ್ನ ಜೀವನಕ್ಕೆ ಪರಿವರ್ತನೆ ಯಾಗುತ್ತೇನೆ,” ಎಂದು ತ್ರಿಶಾ ಚೆಟ್ಟಿ ಹೇಳೀದ್ದಾರೆ.

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ತ್ರಿಶಾ ಚೆಟ್ಟಿ 2007ರಲ್ಲಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.

ಡರ್ಬನ್‌ನಲ್ಲಿ ಜನಿಸಿದ ತ್ರಿಶಾ ಚೆಟ್ಟಿ 50 ಓವರ್‌ಗಳ ಮಾದರಿಯಲ್ಲಿ ಅತಿ ಹೆಚ್ಚು ಬಾರಿ ಔಟಾದ (182) ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 2700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು 16 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಅನುಭವಿ ಕ್ರಿಕೆಟರ್ ತ್ರಿಶಾ ಚೆಟ್ಟಿ ಒಂದೇ ಸರಣಿಯಲ್ಲಿ ಅಂದರೆ, 2014- 2016/17ರ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಔಟ್ ಮಾಡಿದ (23) ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.