Thursday, 12th December 2024

ಹರಿಣವನ್ನು ಹಣಿಯುವುದೇ ಬ್ಲ್ಯಾಕ್ ಕ್ಯಾಪ್ಸ್…!

ಪುಣೆ: ಸೆಮಿಫೈನಲ್ ರೇಸ್‌ನಲ್ಲಿರುವ ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಬುಧವಾರ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿ ಯಾಗಲಿದೆ.

ಕಳೆದ ವಾರ, ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ರೋಚಕ ಪಂದ್ಯದಲ್ಲಿ ಒಂದು ವಿಕೆಟ್‌ ಅಂತರದಿಂದ ಪಾಕಿಸ್ತಾನ ತಂಡವನ್ನು ಸೋಲಿಸಿದರೆ, ಧರ್ಮಶಾಲಾ ದಲ್ಲಿ ಆಸ್ಟ್ರೇಲಿಯಾ ಎಸೆದಿದ್ದ 388 ರನ್‌ ಸವಾಲಿಗೆ ನ್ಯೂಜಿಲೆಂಡ್‌ ಬರೇ ಐದು ರನ್‌ಗಳ ಅಂತರದಿಂದ ಸೋತಿತ್ತು.

ನ್ಯೂಜಿಲೆಂಡ್‌ 6 ಪಂದ್ಯಗಳಿಂದ 8 ‍ಪಾಯಿಂಟ್ಸ್‌ ಸಂಗ್ರಹಿಸಿದೆ. ನಾಲ್ಕು ಸತತ ಗೆಲುವಿನ ನಂತರ ಅದು ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈಗ ಮತ್ತೊಂದು ಪಂದ್ಯದಲ್ಲಿ ಹಿನ್ನಡೆ ಕಂಡರೆ, ಅಫ್ಗಾನಿಸ್ತಾನ (6 ಪಾಯಿಂಟ್‌) ಮತ್ತು ಪಾಕಿಸ್ತಾನ (4 ಪಾಯಿಂಟ್‌) ತಂಡಗಳಿಗೆ ಕ್ಷೀಣ ಅವಕಾಶ ಒದಗಲಿದೆ.

ದಕ್ಷಿಣ ಆಫ್ರಿಕಾ 6 ಪಂದ್ಯಗಳಿಂದ 10 ಪಾಯಿಂಟ್ಸ್‌ ಗಳಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬುಧವಾರದ ಪಂದ್ಯ ಗೆದ್ದರೆ ಅದರ ಸೆಮಿ ಫೈನಲ್ ಸ್ಥಾನ ಗಟ್ಟಿಯಾಗಲಿದೆ.

ಎರಡೂ ತಂಡಗಳು ಬ್ಯಾಟಿಂಗ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿವೆ. ಆದರೆ ಗಹುಂಜೆಯಲ್ಲಿರುವ ಎಂಸಿಎ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳ ಜೊತೆ ಸ್ಪಿನ್ನರ್‌ಗಳಿಗೂ ಸಾಕಷ್ಟು ನೆರವು ನೀಡುತ್ತಿದೆ. ಶ್ರೀಲಂಕಾ ವಿರುದ್ಧ ಅಫ್ಗಾನಿಸ್ತಾನದ ಸ್ಪಿನ್ನರ್‌ಗಳು ಮಿಂಚಿ ಏಳು ವಿಕೆಟ್‌ ಗೆಲುವು ಪಡೆದಿದ್ದನ್ನು ಮರೆಯು ವಂತಿಲ್ಲ.

ದಕ್ಷಿಣ ಆಫ್ರಿಕಾದ ಅನುಭವಿ ಕ್ವಿಂಟನ್ ಡಿ ಕಾಕ್ ಮೂರು ಶತಕಗಳನ್ನು ಬಾರಿಸಿದ್ದು, 431 ರನ್‌ಗಳೊಡನೆ ಬ್ಯಾಟರ್‌ಗಳ ಯಾದಿಯಲ್ಲಿ ಅಗ್ರಸ್ಥಾನ ದಲ್ಲಿದ್ದಾರೆ. ನ್ಯೂಜಿಲೆಂಡ್ ಕಡೆ ಎಡಗೈ ಬ್ಯಾಟರ್‌ ರಚಿನ್ ರವೀಂದ್ರ (406 ರನ್) ಅವರ ಮೇಲೆ ಎಲ್ಲರ ಗಮನ ನೆಟ್ಟಿದೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಹೆನ್ರಿಚ್‌ ಕ್ಲಾಸೆನ್ ಅವರು ಬಿರುಸಿನ ಆಟವಾಡಿದರೆ, ನ್ಯೂಜಿಲೆಂಡ್‌ನಲ್ಲಿ ಜಿಮ್ಮಿ ನಿಶಾಮ್ ಅವರೂ ಅಂಥ ಆಟವಾಡಬಲ್ಲ ಸಮರ್ಥರು.