ಚೆನ್ನೈ: 329 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿರುವ ಭಾರತ ತಂಡವು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ಗೆ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ತಿರುಗೇಟು ನೀಡುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಇಂಗ್ಲೆಂಡ್ ಐದು ವಿಕೆಟ್ ಕಳೆದುಕೊಂಡು 60 ರನ್ ಗಳಿಸಿ, ಚಿಂತಾಜನಕ ಸ್ಥಿತಿಯಲ್ಲಿದೆ.
ರೋರಿ ಬರ್ನ್ಸ್ (0), ಡಾಮಿನಿಕ್ ಸಿಬ್ಲಿ (16), ನಾಯಕ ಜೋ ರೂಟ್ (6) ಹಾಗೂ ಡ್ಯಾನಿಯಲ್ ಲಾರೆನ್ಸ್ (9) ಹಾಗೂ ಬೆನ್ ಸ್ಟೋಕ್ಸ್ 18 ರನ್ ಗಳಿಸಿ, ಅಶ್ವಿನ್‌ಗೆ ಬೌಲ್ಡ್ ಆದರು.
ಪದಾರ್ಪಣಾ ಟೆಸ್ಟ್ ಪಂದ್ಯದಲ್ಲಿ ರೂಟ್ ವಿಕೆಟ್ ಕಬಳಿಸಿದ ಸ್ಪಿನ್ನರ್ ಅಕ್ಷರ್ ಪಟೇಲ್ ಜೊಚ್ಚಲ ವಿಕೆಟ್ ಸಾಧನೆ ಮಾಡಿದರು. ರವಿಚಂದ್ರನ್ ಅಶ್ವಿನ್ ಮೂರು ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಪಡೆದರು.
ಈ ಮೊದಲು ರೋಹಿತ್ ಶರ್ಮಾ ಅಮೋಘ ಶತಕ (161) ಮತ್ತು ಅಜಿಂಕ್ಯ ರಹಾನೆ (67) ಹಾಗೂ ರಿಷಭ್ ಪಂತ್ (58*) ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಮ್ ಇಂಡಿಯಾ 329 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಅಜೇಯ ಅರ್ಧಶತಕ ಸಾಧನೆ ಮಾಡಿದರು. 77 ಎಸೆತಗಳನ್ನು ಎದುರಿಸಿದ ಪಂತ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿ ಔಟಾಗದೆ ಉಳಿದರು.