ಕೋಲ್ಕತಾ: ಐಪಿಎಲ್ 2024ರ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ವಾರಾಂತ್ಯದಲ್ಲಿ ಒಂದೇ ದಿನ ಎರಡು ಪಂದ್ಯಗಳು ನಡೆಯುತ್ತಿವೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸುತ್ತಿದೆ.
ಉಭಯ ತಂಡಗಳು ನೂತನ ನಾಯಕನೊಂದಿಗೆ ಕಣಕ್ಕಿಳಿಯುತ್ತಿದ್ದು, ರೋಚಕ ಹಣಾಹಣಿಕಗೆ ಕೆಕೆಆರ್ ತವರು ಮೈದಾನ ಈಡನ್ ಗಾರ್ಡನ್ಸ್ ಆತಿಥ್ಯ ವಹಿಸುತ್ತಿದೆ.
ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂಬತ್ತು ವರ್ಷಗಳ ಬಳಿಕ, ಮಿಚೆಲ್ ಸ್ಟಾರ್ಕ್ ಐಪಿಎಲ್ ಆಡುತ್ತಿದ್ದಾರೆ. ಗೌತಮ್ ಗಂಭೀರ್ ಕೆಕೆಆರ್ ಬಳಗ ಸೇರಿಕೊಂಡಿದ್ದಾರೆ. ಇದೇ ವೇಳೆ, ಶ್ರೇಯಸ್ ಅಯ್ಯರ್ ಮತ್ತೆ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ನಾಯಕನಾಗಿ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್, ಹೊಸತನದೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಬಾರಿ ನಾಯಕತ್ವ ವಹಿಸಿದ್ದ ಐಡೆನ್ ಮರ್ಕ್ರಾಮ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಏಕದಿನ ವಿಶ್ವಕಪ್ ಗೆದ್ದ ಕಮಿನ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಸ್‌ಆರ್‌ಎಚ್ ಮಾಲಕಿ ಕಾವ್ಯಾ ಮಾರನ್ ಬರೋಬ್ಬರಿ 20.25 ಕೋಟಿ ಖರ್ಚು ಮಾಡಿದ್ದಾರೆ.
ಸದ್ಯ ಕೆಕೆಆರ್ ತಂಡದಲ್ಲಿ ಯಾವುದೇ ಗಾಯಾಳುಗಳ ಸಮಸ್ಯೆ ಇಲ್ಲ. ಹೀಗಾಗಿ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಜೊತೆಗೆ ಫಿಲ್ ಸಾಲ್ಟ್ ವಿದೇಶಿ ಆಟಗಾರರ ಸ್ಥಾನ ತುಂಬುವ ಸಾಧ್ಯತೆ ಹೆಚ್ಚಿದೆ. ಅತ್ತ ಸನ್‌ರೈಸರ್ಸ್ ಪರ ವನಿಂದು ಹಸರಂಗ ಆರಂಭಿಕ ಪಂದ್ಯಗಳಲ್ಲಿ ಆಡುತ್ತಿಲ್ಲ. ಪ್ಯಾಟ್ ಕಮ್ಮಿನ್ಸ್ ಜೊತೆಗೆ ಹೆನ್ರಿಚ್ ಕ್ಲಾಸೆನ್ ಆಡುವುದು ಬಹುತೇಕ ಖಚಿತ.
ಕೆಕೆಆರ್ ಬಳಗ
ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಎಸ್‌ಆರ್‌ಎಚ್ ಬಳಗ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.