Sunday, 15th December 2024

Suryakumar Birthday: 34ನೇ ವಸಂತಕ್ಕೆ ಕಾಲಿಟ್ಟ ಸೂರ್ಯಕುಮಾರ್ ಯಾದವ್

Suryakumar Yadav

ಮುಂಬಯಿ: ಭಾರತದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್(Suryakumar Birthday), ಇಂದು 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂರ್ಯ(Suryakumar Yadav) ಅವರಿಗೆ ಬಿಸಿಸಿಐ ಸೇರಿ ಹಾಲಿ ಮತ್ತು ಮಾಜಿ ಆಟಗಾರರು ಶುಭ ಕೋರಿದ್ದಾರೆ.

ಸೂರ್ಯಕುಮಾರ್ ಯಾದವ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡ ಅವಿಭಾಗ್ಯ ಅಂಗವಾಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಇದೇ ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯ ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಅಸಾಮಾನ್ಯ ಕಾಚ್‌ ಒಂದರ ನೆರವಿನಿಂದ ಭಾರತ ತಂಡ ವಿಶ್ವಕಪ್‌ ಗೆಲ್ಲುವಂತಾಯಿತು. ಈ ಕ್ಯಾಚ್‌ ಬಳಿಕ ಸೂರ್ಯ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಭಾರತ ಟಿ20 ತಂಡದ ನಾಯಕನೂ ಆಗಿರುವ ಸೂರ್ಯ ಇನ್ನಷ್ಟು ದೊಡ್ಡ ಸಾಧನೆ ಮಾಡುವಂತಾಗಲಿ ಎಂದು ಅವರ ಅಭಿಮಾನಿಗಳು ಹರಸಿದ್ದಾರೆ.

ಸೂರ್ಯಕುಮಾರ್‌ ಬಾಲ್ಯ

ಸೂರ್ಯಕುಮಾರ್ ಯಾದವ್, ಸೆಪ್ಟೆಂಬರ್ 14, 1990ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದರು. ಸೂರ್ಯಕುಮಾರ್ ಉತ್ತರ ಪ್ರದೇಶದಲ್ಲಿ ಹುಟ್ಟಿದರೂ, ಕ್ರಿಕೆಟ್ ಬದುಕು ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಸೂರ್ಯಕುಮಾರ್ ಯಾದವ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ಕ್ರಿಕೆಟ್ ತಂಡವನ್ನು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ Suryakumar Yadav: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಗಾಯ

ಕರಾವಳಿಯ ನಂಟು

ಸೂರ್ಯಕುಮಾರ್‌ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಉಡುಪಿಯ ಕಾಪು ಮೂಲದವರಾಗಿದ್ದಾರೆ. ಹೀಗಾಗಿ ಸೂರ್ಯಗೆ ಕರಾವಳಖಿಯ ನಂಟು ಕೂಡ ಇದೆ. ಟಿ20 ವಿಶ್ವಕಪ್‌ ಗೆಲುವಿನ ಬಳಿಕ ಸೂರ್ಯ ಅವರು ಪತ್ನಿ ಜತೆ ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿ(Hosa Marigudi Kaup) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿದ್ದರು.

ಮೊದಲ ಎಸೆತವೇ ಸಿಕ್ಸರ್‌

ಸೂರ್ಯಕುಮಾರ್ ಯಾದವ್, ಮಾರ್ಚ್ 14, 2021ರಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಮಾರ್ಚ್‌ 18ರಂದು ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೂರ್ಯನಿಗೆ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ಪಂದ್ಯದಲ್ಲಿ ತಾನೆದುರಿಸಿದ ಮೊದಲ ಪಂದ್ಯದಲ್ಲೇ ಸೂರ್ಯಕುಮಾರ್ ಯಾದವ್ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ, ಈ ಸಾಧನೆ ಮಾಡಿದ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಗೆ ಸೂರ್ಯ ಪಾತ್ರರಾಗಿದ್ದರು.

109 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 3213ರನ್‌ ಬಾರಿಸಿದ್ದಾರೆ. 4ಟಿ20 ಶತಕ ಬಾರಿಸಿದ್ದಾರೆ. 71 ಟಿ20 ಪಂದ್ಯಗಳನ್ನು ಆಡಿರುವ ಸೂರ್ಯ 2432 ರನ್‌, 4 ಶತಕ ಮತ್ತು 20 ಅರ್ಧಶತಕ ಬಾರಿಸಿದ್ದಾರೆ. 117 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಏಕದಿನದಲ್ಲಿ 37 ಪಂದ್ಯಗಳಿಂದ 773 ರನ್‌ ಗಳಿಸಿದ್ದಾರೆ. ಇದುವರೆಗೆ ಏಕೈಕ ಟೆಸ್ಟ್‌ ಮಾತ್ರ ಆಡಿದ್ದಾರೆ.

ಕಳೆದ 2 ವರ್ಷಗಳಿಂದ ಸೂರ್ಯ ಅವರು 20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲೇ ಕಾಣಿಸಿಕೊಂಡಿದ್ದಾರೆ. ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರ ಈ ಶೈಲಿಯನ್ನು ನೋಡುವುದೇ ಒಂದು ರೀತಿ ಚೆಂದ. ಸ್ಕೂಪ್‌ ಶಾಟ್‌ ಹೊಡೆಯುವುದರಲ್ಲಿ ಸೂರ್ಯ ಎತ್ತಿದ ಕೈ. ಈ ಶಾಟ್‌ ಅನ್ನು ಅವರು ಕಲಿತದ್ದು ರಬ್ಬರ್‌ ಬಾಲ್‌ನಲ್ಲಿ ಆಡುವ ಮೂಲಕವಂತೆ. ಈ ವಿಚಾರವನ್ನು ಹಿಂದೊಮ್ಮೆ ಸಂದರ್ಶನದಲ್ಲಿ ಅವರು ತಿಳಿಸಿದ್ದರು.