ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ರಾತ್ರಿ ನಡೆದಿದ್ದ ನಾಲ್ಕನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ 135 ರನ್‌ಗಳಿಂದ ಗೆಲುವು ಸಾಧಿಸಿದ ಭಾರತ ತಂಡ 3-1 ಅಂತರದಿಂದ ಸರಣಿ ಗೆಲುವು ಸಾಧಿಸಿತು. ಅಂತಿಮ ಪಂದ್ಯದಲ್ಲಿ ವಿಕೆಟ್ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ತೋರಿದ ವರ್ತನೆಯೊಂದು ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಗಳ ಮನ ಗೆದ್ದಿದೆ.
ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿದ್ದ ವೇಳೆ ಅರ್ಷದೀಪ್ ಸಿಂಗ್ ಎಸೆತದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಮ್ ದೊಡ್ಡ ಹೊಡೆತವೊಂದನ್ನು ಬಾರಿಸುವ ಯತ್ನದಲ್ಲಿ ಕ್ಯಾಚ್ ಔಟ್ ಆಗಿ ವಿಕೆಟ್ ಕಳೆದುಕೊಂಡರು. ಗಗನಚುಂಬಿ ಜಿಗಿದ ಚೆಂಡನ್ನು ರವಿ ಬಿಷ್ಣೋಯ್ ಅಷ್ಟೇ ಜಾಗರೂಕರಾಗಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ದೊಡ್ಡ ವಿಕೆಟ್ ಪತನಗೊಂಡ ಖುಷಿಯಲ್ಲಿ ಸಂಭ್ರಮಿಸುವ ವೇಳೆ ಬಿಷ್ಣೋಯ್ ತಲೆಯಿಂದ ಬಿದ್ದ ಕ್ಯಾಪ್ ಅನ್ನು ಸೂರ್ಯಕುಮಾರ್ ಯಾದವ್ ಆಕಸ್ಮಿಕವಾಗಿ ತುಳಿದರು. ಇದನ್ನು ಮನಗಂಡ ಸೂರ್ಯಕುಮಾರ್ ತಕ್ಷಣ ಕ್ಯಾಪ್ ಮೇಲೆತ್ತಿ ನಮಸ್ಕರಿಸಿ ಗೌರವದ ಸಂಕೇತವಾಗಿ ಚುಂಬಿಸಿದರು. ಸೂರ್ಯ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮ ಅವರ ಶತಕದ ಅಬ್ಬರದಿಂದ ಒಂದೇ ವಿಕೆಟಿಗೆ 283 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಭಾರೀ ಆಘಾತ ಅನುಭವಿಸಿತು. 10 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 18.2 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟಾಯಿತು. ಭಾರತದ ಪರ ಬಿಗಿ ದಾಳಿ ನಡೆಸಿದ ಅರ್ಶದೀಪ್ ಸಿಂಗ್ 3 ವಿಕೆಟ್ ಕಿತ್ತರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಿತ್ತರು.
ಇದನ್ನೂ ಓದಿ SMAT 2024: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ರಾಜ್ಯ ತಂಡ ಪ್ರಕಟ; ಸಮಿತ್ ದ್ರಾವಿಡ್‌ಗೆ ನಿರಾಸೆ
ಜಿದ್ದಿಗೆ ಬಿದ್ದವರಂತೆ ಅಬ್ಬರದ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ 56 ಎಸೆತಗಳಿಂದ ಅಜೇಯ 109 ರನ್ ಬಾರಿಸಿದರೆ (6 ಬೌಂಡರಿ, 9 ಸಿಕ್ಸರ್), ತಿಲಕ್ ವರ್ಮ 47 ಎಸೆತ ಎದುರಿಸಿ ಅಜೇಯ 120 ರನ್ ಸಿಡಿಸಿದರು (9 ಬೌಂಡರಿ, 10 ಸಿಕ್ಸರ್). ಈ ಜೋಡಿ ಮುರಿಯದ 2ನೇ ವಿಕೆಟಿಗೆ 86 ಎಸೆತಗಳಿಂದ 210 ರನ್ ಕಲೆ ಹಾಕಿ ಭದ್ರ ಬುನಾದಿ ಹಾಕಿದರು.
ಬೃಹತ್ ಮೊತ್ತ ಪೇರಿಸುವ ಮೂಲಕ ಭಾರತ ತಂಡ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ. 2023ರ ಸೆಂಚುರಿಯನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 3ಕ್ಕೆ 258 ರನ್ ಗಳಿಸಿತ್ತು. ಈ ದಾಖಲೆ ಈಗ ಪತನಗೊಂಡಿದೆ.