ದುಬೈ: ಭಾನುವಾರ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 32 ರನ್ಗಳಿಂದ ಗೆದ್ದು ಚೊಚ್ಚಲ ಬಾರಿಗೆ ವಿಶ್ವ ಚಾಂಒಪಿಯನ್ ಪಟ್ಟಕ್ಕೇರಿತು. ಇದೇ ಪಂದ್ಯದಲ್ಲಿ ಕಿವೀಸ್ ತಂಡದ ಹಿರಿಯ ಆರಂಭಿಕ ಆಟಗಾರ್ತಿ ಸುಜಿ ಬೇಟ್ಸ್(Suzie Bates) ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಸುಜಿ ಬೇಟ್ಸ್ ಅವರು ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಈ ವೇಳೆ ಭಾರತ ತಂಡದ ಮಾಜಿ ಬ್ಯಾಟರ್ ಮಿಥಾಲಿ ರಾಜ್(Mithali Raj) ದಾಖಲೆ ಪತನಗೊಂಡಿತು.
37 ವರ್ಷದ ಸುಜಿ ಬೇಟ್ಸ್ 2006ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಅವರು ಒಟ್ಟು 334* ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಇದರಲ್ಲಿ 163 ಏಕದಿನ ಮತ್ತು 171 ಟಿ20 ಪಂದ್ಯಗಳು ಸೇರಿವೆ. ಮಿಥಾಲಿ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತವನ್ನು 333 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಮಿಥಾಲಿ 12 ಟೆಸ್ಟ್, 232 ಏಕದಿನ ಮತ್ತು 89 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ IND vs NZ 2nd Test: ಕಿವೀಸ್ ಟೆಸ್ಟ್ನಿಂದ ರಿಷಭ್ ಪಂತ್ ಔಟ್?
ಮೂರನೇ ಪ್ರಯತ್ನದಲ್ಲಿ ಕಪ್ ಗೆದ್ದ ಕಿವೀಸ್
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 5 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಪರ ಬ್ಯಾಟಿಂಗ್ನಲ್ಲಿ ಸುಜಿ ಬೇಟ್ಸ್ 32, ಜಾರ್ಜಿಯಾ ಪ್ಲಿಮ್ಮರ್ 9, ಅಮೆಲಿಯಾ ಕೆರ್ 43, ನಾಯಕಿ ಸೋಫಿ ಡಿವೈನ್ 6, ಬ್ರೂಕ್ ಹ್ಯಾಲಿಡೇ 38, ಮ್ಯಾಡಿ ಗ್ರೀನ್ ಔಟಾಗದೆ 12 ಮತ್ತು ಇಸಾಬೆಲ್ಲಾ ಗೇಜ್ 3 ರನ್ ಕೊಡುಗೆ ಸಲ್ಲಿಸಿದರು. ಹರಿಣಗಳ ಪರ ಬೌಲಿಂಗ್ ನಲ್ಲಿ ನಾನ್ಕುಲುಲೆಕೊ ಮ್ಲಾಬಾ 2 ವಿಕೆಟ್ ಕಿತ್ತರು. ಕ್ಲೋಯ್ ಟ್ರಯಾನ್ ಮತ್ತು ಅಯಬೊಂಗ ಖಾಕಾ ತಲಾ ಒಂದು ವಿಕೆಟ್ ಪಡೆದರು.
ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ ಉತ್ತಮ ಆರಂಭದ ಹೊರತಾಗಿಯೂ 9 ವಿಕೆಟ್ಗೆ 126 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕರಾದ ಲಾರಾ ವೊಲ್ವಾರ್ಟ್(33) ಹಾಗೂ ತಜ್ಮೀನ್ ಬ್ರಿಟ್ಸ್(17) ಪವರ್-ಪ್ಲೇನಲ್ಲಿ 47 ರನ್ ಸಿಡಿಸಿದರು. ಆದರೆ ಬ್ರಿಟ್ಸ್ ಔಟಾದ ಬಳಿಕ ತಂಡ ದಿಢೀರ್ ಕುಸಿತಕ್ಕೆ ಒಳಗಾಯಿತು. ಸತತ ವಿಕೆಟ್ ಕಳೆದುಕೊಂಡ ತಂಡ ಒತ್ತಡಕ್ಕೊಳಗಾಗಿ ಟ್ರೋಫಿ ಕೈ ಚೆಲ್ಲಿತು. ಅಮೇಲಿ ಕೇರ್, ರೊಸಾಮೆರಿ ಮೈರ್ ತಲಾ 3 ವಿಕೆಟ್ ಕಿತ್ತರು.