ಕೋಲ್ಕತ್ತ: ಬೆನ್ನು ನೋವಿನಿಂದಾಗಿ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್ ಅವರು ಕ್ರೀಡೆಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ.
ರೈಲ್ವೆ ತಂಡವನ್ನು ಪ್ರತಿನಿಧಿಸುವ ಸ್ವಪ್ನಾ, ತೆಲಂಗಾಣದ ವಾರಂಗಲ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಹೈಜಂಪ್‌ನಲ್ಲಿ ಗುರುವಾರ ಚಿನ್ನದ ಪದಕ ಗೆದ್ದುಕೊಂಡಿದ್ದರು.
ತುಂಬಾ ಹತಾಶೆಗೆ ಒಳಗಾಗಿದ್ದೇನೆ. ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವುದು ಸುಲಭವಲ್ಲ. ಸ್ವಲ್ಪ ಗೊಂದಲದಲ್ಲಿದ್ದರೂ ವಿದಾಯ ಹೇಳಲು ಸಿದ್ಧವಾಗಿದ್ದೇನೆ. ಕೋಲ್ಕತ್ತ ತಲುಪಿದ ಬಳಿಕ ಈ ಕುರಿತು ನಿರ್ಧಾರ ಪ್ರಕಟಿಸುವೆ’ ಎಂದು ವಾರಂಗಲ್‌ನಲ್ಲಿ ತಿಳಿಸಿದರು.
ಸ್ವಪ್ನಾ 2018ರ ಜಕಾರ್ತ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೆಪ್ಟಾಥ್ಲಾನ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿ ದ್ದರು. ಅವರ ಎರಡೂ ಪಾದದ ಮೇಲೆ ಆರು ಕಾಲ್ಬೆರಳುಗಳಿವೆ. 2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು.