Wednesday, 4th December 2024

Syed Mushtaq Ali Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್‌ ಜಯ

ಇಂದೋರ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಕರ್ನಾಟಕ(Tamil Nadu vs Karnataka) ತಂಡ ಇಂದು(ಭಾನುವಾರ) ನಡೆದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20(Syed Mushtaq Ali Trophy) ಪಂದ್ಯದಲ್ಲಿ ಬದ್ಧ ಎದುರಾಳಿ ತಮಿಳುನಾಡು ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿದೆ.

ಇಂದೋರ್‌ನ ಎಮರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ತಮಿಳುನಾಡು ತಂಡ ವಿ.ಕೌಶಿಕ್‌(10 ಕ್ಕೆ 3) ಮತ್ತು ಮನೋಜ್ ಭಾಂಡಗೆ(19 ಕ್ಕೆ 3) ಘಾತಕ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 90 ರನ್‌ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಕರ್ನಾಟಕ ಅನುಭವಿ ಆಟಗಾರರಾದ ಮನೀಷ್‌ ಪಾಂಡೆ ಮತ್ತು ನಾಯಕ ಮಯಾಂಕ್‌ ಅಗರ್ವಾಲ್‌ ಜತೆಯಾಟದ ನೆರವಿನಿಂದ 11.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ನಷ್ಟಕ್ಕೆ 93 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕರ್ನಾಟಕ್ಕೆ ಒಲಿದ 3ನೇ ಗೆಲುವು. ಸದ್ಯ ಬಿ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದು 12 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಡಿದ ಎಲ್ಲ 4 ಪಂದ್ಯ ಗೆದ್ದಿರುವ ಬರೋಡಾ ತಂಡ 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ IND vs AUS: ಭಾರತದ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಭವಿಷ್ಯ ನುಡಿದ ಹರ್ಭಜನ್‌ ಸಿಂಗ್‌!

ಬ್ಯಾಟಿಂಗ್‌ ಆರಂಭಿಸಿದ ತಮಿಳುನಾಡು ತಂಡ ಆರಂಭದಲ್ಲೇ ಆಘಾತಕ್ಕೆ ಸಿಲುಕಿತು. 7ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ತಂಡಕ್ಕೆ ಆಸರೆಯಾದ ಆಟಗಾರನೆಂದರೆ ಕರ್ನಾಟಕ ಮೂಲದವರೇ ಆದ ಸ್ಪಿನ್ನರ್‌ ವರಣ್‌ ಚಕ್ರವರ್ತಿ ಮಾತ್ರ. 9ನೇ ಕ್ರಮಾಂಕದಲ್ಲಿ ಆಡಲಿಳಿದ ಚಕ್ರವರ್ತಿ 3 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 24 ರನ್‌ ಬಾರಿಸಿದರು. ಇವರನ್ನು ಹೊರತುಪಡಿಸಿ ನಾಯಕ ಶಾರೂಖ್‌ ಖಾನ್(19) ರನ್‌ ಗಳಿಸಿದರು.

ಚೇಸಿಂಗ್‌ ವೇಳೆ ಮಯಾಂಕ್‌ ಅಗರ್ವಾಲ್‌ ಮತ್ತು ಮನೀಷ್‌ ಪಾಂಡೆ ಬಿರುಸಿನ ಬ್ಯಾಟಿಂಗ್‌ ಮೂಲಕ ಮೊದಲ ವಿಕೆಟ್‌ಗೆ 76 ರನ್‌ ಒಟ್ಟುಗೂಡಿಸಿದರು. ಮನೀಷ್‌ ಪಾಂಡೆ 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿ 42 ರನ್‌ ಬಾರಿಸಿದರೆ, ಅಗರ್ವಾಲ್‌ 30 ರನ್‌ ಗಳಿಸಿದರು. ತಮಿಳುನಾಡು ಪರ ಗುರ್ಜಪ್ನೀತ್ ಸಿಂಗ್ 15 ರನ್‌ಗೆ 3 ವಿಕೆಟ್‌ ಕಿತ್ತರು. ಕರ್ನಾಟಕ ತಂಡ ಮುಂದಿನ ಪಂದ್ಯವನ್ನು ಅಗ್ರಸ್ಥಾನಿ ಬರೋಡಾ ವಿರುದ್ಧ ಆಡಲಿದೆ. ಈ ಪಂದ್ಯ ಡಿ.3 ರಂದು ನಡೆಯಲಿದೆ.