Wednesday, 4th December 2024

ಸಯ್ಯದ್‌ ಮುಷ್ತಾಕ್‌ ಟೂರ್ನಿ; ಮುಂಬೈ ತಂಡ ಸೇರಿದ ‌‌‌‌‌‌‌‌ಸೂರ್ಯಕುಮಾರ್‌, ದುಬೆ

ಮುಂಬಯಿ: ಟೀಮ್‌ ಇಂಡಿಯಾದ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಮತ್ತು ಆಲ್‌ರೌಂಡರ್‌ ಶಿವಂ ದುಬೆ ಅವರು ಪ್ರಸಕ್ತ ಸಾಗುತ್ತಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ(Syed Mushtaq Ali Trophy) ಟಿ20 ಟೂರ್ನಿಯಲ್ಲಿ ಆಡಲು ನಿರ್ಧರಿಸಿದ್ದಾರೆ. ಆಂಧ್ರ ವಿರುದ್ಧ ನಾಳೆ (ಡಿ. 3) ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಸೂರ್ಯ ಮತ್ತು ದುಬೆ ಸೇರ್ಪಡೆಯಿಂದ ಮುಂಬೈ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ʼಇʼ ಗುಂಪಿನಲ್ಲಿರುವ ಮುಂಬೈ ತಂಡ ಸದ್ಯ ಆಡಿದ 4 ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದು 12 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ ಎಲ್ಲ ನಾಲ್ಕು ಪಂದ್ಯ ಗೆದ್ದು ಅಗ್ರಸ್ಥಾನದಲ್ಲಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು 3–1 ರಿಂದ ಗೆದ್ದ ಬಳಿಕ ಕುಟುಂಬದ ಕಾಯರ್ಕ್ರಮದಲ್ಲಿ ಪಾಲ್ಗೊಂಡಿದ್ದ ಸೂರ್ಯಕುಮಾರ್‌ ಎರಡು ವಾರಗಳ ಕಾಲ ಕ್ರಿಕೆಟ್‌ನಿಂದ ವಿರಾಮ ಪಡೆದಿದ್ದರು. ಸೂರ್ಯಕುಮಾರ್‌ ಮಾತ್ರವಲ್ಲದೆ ಶಿವಂ ದುಬೆ ಕೂಡ ಮುಂಬೈ ತಂಡ ಕೂಡಿಕೊಂಡಿದ್ದಾರೆ. ಪ್ರಸ್ತುತ ಶ್ರೇಯಸ್‌ ಅಯ್ಯರ್ ಅವರು ಮುಂಬೈ ತಂಡದ ನಾಯಕರಾಗಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಇದೀಗ ಮತ್ತೆ ಫಾರ್ಮ್‌ ಕಂಡುಕೊಳ್ಳುವ ಸಲುವಾಗಿ ಅವರು ದೇಶೀಯ ಕ್ರಿಕೆಟ್‌ ಆಡಲು ನಿರ್ಧರಿಸಿದ್ದಾರೆ. ಗಾಯದಿಂದ ವಿಶ್ರಾಂತಿ ಪಡೆದಿದ್ದ ಶಿವಂ ದುಬೆ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.

IND vs AUS: ಭಾರತದ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಭವಿಷ್ಯ ನುಡಿದ ಹರ್ಭಜನ್‌ ಸಿಂಗ್‌!

ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್‌ ಜಯ

ಭಾನುವಾರ ನಡೆದಿದ್ದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20(Syed Mushtaq Ali Trophy) ಪಂದ್ಯದಲ್ಲಿ ಬದ್ಧ ಎದುರಾಳಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಮೆರೆದಾಡಿತ್ತು. ಇಂದೋರ್‌ನ ಎಮರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ತಮಿಳುನಾಡು ತಂಡ ವಿ.ಕೌಶಿಕ್‌(10 ಕ್ಕೆ 3) ಮತ್ತು ಮನೋಜ್ ಭಾಂಡಗೆ(19 ಕ್ಕೆ 3) ಘಾತಕ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 90 ರನ್‌ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಕರ್ನಾಟಕ ಅನುಭವಿ ಆಟಗಾರರಾದ ಮನೀಷ್‌ ಪಾಂಡೆ ಮತ್ತು ನಾಯಕ ಮಯಾಂಕ್‌ ಅಗರ್ವಾಲ್‌ ಜತೆಯಾಟದ ನೆರವಿನಿಂದ 11.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ನಷ್ಟಕ್ಕೆ 93 ರನ್‌ ಬಾರಿಸಿ ಗೆಲುವಿನ ನಗೆ ಬೀರಿತ್ತು.