ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಆಕರ್ಷಕ ಅರ್ಧಶತಕ ಆಟದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 186 ರನ್ ಬೃಹತ್ ಮೊತ್ತ ಕಲೆ ಹಾಕಿತು. ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ತಲಾ 52 ರನ್ ಗಳಿಸುವ ಮೂಲಕ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ನಾಯಕ ರೋಹಿತ್ ಶರ್ಮಾ 19, ಸೂರ್ಯಕುಮಾರ್ ಯಾದವ್ 8, ವೆಂಕಟೇಶ್ ಅಯ್ಯರ್ 33 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ರೊಸ್ಟನ್ ಚೆಸ್ 3 ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಆಟಗಾರ ಬ್ರಂಡನ್ ಕಿಂಗ್ 22, ಕೈಲ್ ಮೇಯರ್ಸ್ 9, ನಿಕೋಲಸ್ ಪೂರನ್ 62, ರೋವ್ಮನ್ ಪೊವೆಲ್ 68 ರನ್ ಗಳಿಸಿದರೂ ಪ್ರಯೋಜನವಾಗಲಿಲ್ಲ. ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೆಲುವಿನ ದಡ ಸೇರಲಿದ್ದ ಪ್ರವಾಸಿ ವಿಂಡೀಸ್‌ಗೆ ಟೀಂ ಇಂಡಿಯಾದ ಕಡೆಯ ಮೂರು ಓವರುಗಳಲ್ಲಿ ರನ್ ಗಳಿಸಲು ತಿಣುಕಾಡುವಂತೆ ಮಾಡಿತು. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ರನ್ ಗತಿಗೆ ನಿಯಂತ್ರಣ ಹಾಕಿದರು. ರಿಷಭ್ ಪಂತ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.