Thursday, 12th December 2024

ಇಂದಿನಿಂದ ಭಾರತ-ಶ್ರೀಲಂಕಾ ಟಿ20 ಸರಣಿ

ಮುಂಬಯಿ: ಶ್ರೀಲಂಕಾ ತಂಡ ಭಾರತಕ್ಕೆ ಕಾಲಿಟ್ಟಿದೆ. ಮಂಗಳವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಟೀಮ್‌ ಇಂಡಿಯಾದ ಯುವ ಪಡೆ ಹೋರಾಟಕ್ಕೆ ಅಣಿಯಾಗಿದೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಪಾಂಡ್ಯ ಅವರನ್ನು ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಮುಂದುವರಿಸು ವುದು ಬಿಸಿಸಿಐ ಯೋಜನೆಯಾಗಿದೆ.

ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆದ ಮಳೆಪೀಡಿತ ಟಿ20 ಸರಣಿಯನ್ನು ಹಾರ್ದಿಕ್‌ ಪಾಂಡ್ಯ ಪಡೆ ಜಯಿಸಿದ್ದನ್ನು ಮರೆಯುವಂತಿಲ್ಲ.  ರಿಷಭ್‌ ಪಂತ್‌, ಭುವನೇಶ್ವರ್‌ ಕುಮಾರ್‌ ಇದ್ದರು. ಲಂಕಾ ವಿರುದ್ಧ ಇವರಿಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಅದರಲ್ಲೂ ಪಂತ್‌ ರಸ್ತೆ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಿವೀಸ್‌ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಪಂತ್‌, ಕೀಪಿಂಗ್‌ ಕೂಡ ನಡೆಸಿದ್ದರು. ಲಂಕಾ ವಿರುದ್ಧ ಈ ಎರಡೂ ಸ್ಥಾನ ತುಂಬ ಬಲ್ಲ ಆಟಗಾರನೆಂದರೆ ಇಶಾನ್‌ ಕಿಶನ್‌. ಬಾಂಗ್ಲಾ ಪ್ರವಾಸದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮೆರೆದಿರುವ ಇಶಾನ್‌ ಕಿಶನ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ.

ಇಶಾನ್‌ ಕಿಶನ್‌ ಅವರೊಂದಿಗೆ ಋತುರಾಜ್‌ ಗಾಯಕ್ವಾಡ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಶುಭಮನ್‌ ಗಿಲ್‌ ವನ್‌ ಡೌನ್‌ ನಲ್ಲಿ ಬರಬಹುದು. ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಇದ್ದಾರೆ. ಮಧ್ಯಮ ಸರದಿಗೆ ಬಲ ತುಂಬಲು ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ ಮತ್ತು ರಾಹುಲ್‌ ತ್ರಿಪಾಠಿ ನಡುವೆ ಪೈಪೋಟಿ ಇದೆ.

ಪಾಂಡ್ಯ ಅವರೊಂದಿಗೆ ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಪಾತ್ರ ನಿಭಾಯಿಸಬೇಕಾಗುತ್ತದೆ. ಶ್ರೀಲಂಕಾ ಏಷ್ಯಾ ಕಪ್‌ ಚಾಂಪಿಯನ್‌ ಎಂಬ ಹಣೆಪಟ್ಟಿಯೊಂದಿಗೆ ಈ ಸರಣಿಯನ್ನು ಆಡಲಿಳಿಯುತ್ತಿದೆ.

ಭನುಕ ರಾಜಪಕ್ಸ ಲಂಕಾ ತಂಡದ ಕೀ ಬ್ಯಾಟ್ಸ್‌ ಮನ್‌. ಹಾಗೆಯೇ ಐಪಿಎಲ್‌ನಲ್ಲಿ ಮಿಂಚಿದ ವನಿಂದು ಹಸರಂಗ, ಧನಂಜಯ ಡಿ ಸಿಲ್ವ, ಲಹಿರು ಕುಮಾರ ಕೂಡ ಭಾರತಕ್ಕೆ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ನಮ್ಮವರು “ನಿರ್ಭೀತ ಕ್ರಿಕೆಟ್‌’ (ಫಿಯರ್‌ಲೆಸ್‌) ಆಡಿದರೆ ಲಂಕೆಯನ್ನು ಮಣಿಸುವುದು ಸಮಸ್ಯೆಯೇ ಆಗದು.

ತಂಡಗಳು
ಭಾರತ:
ಹಾರ್ದಿಕ್‌ ಪಾಂಡ್ಯ (ನಾಯಕ), ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ಉಪನಾಯಕ), ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌, ಶಿವಂ ಮಾವಿ, ಮುಕೇಶ್‌ ಕುಮಾರ್‌.

ಶ್ರೀಲಂಕಾ:
ದಸುನ್‌ ಶಣಕ (ನಾಯಕ), ಪಥುಮ್‌ ನಿಸ್ಸಂಕ, ಆವಿಷ್ಕ ಫೆರ್ನಾಂಡೊ, ಸದೀರ ಸಮರವಿಕ್ರಮ, ಕುಸಲ್‌ ಮೆಂಡಿಸ್‌, ಭನುಕ ರಾಜಪಕ್ಸ, ಚರಿತ ಅಸಲಂಕ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ (ಉಪನಾಯಕ), ಅಶೇನ್‌ ಬಂಡಾರ, ಮಹೀಶ್‌ ತೀಕ್ಷಣ, ಚಮಿಕ ಕರುಣಾರತ್ನೆ, ದಿಲ್ಶನ್‌ ಮದುಶಂಕ, ಕಸುನ್‌ ರಜಿತ, ದುನಿತ್‌ ವೆಲ್ಲಲಗೆ, ಪ್ರಮೋದ್‌ ಮದುಶಾನ್‌, ಲಹಿರು ಕುಮಾರ, ನುವಾನ್‌ ತುಷಾರ.

Read E-Paper click here