ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಬಳಗಕ್ಕೆ ಈ ಸರಣಿ ಮಹತ್ವದ್ದಾಗಿದೆ.
ಪ್ರವಾಸಕ್ಕೆ ಮುನ್ನ ತವರಿನಲ್ಲಿ ವಿಶ್ವ ನಂ. 1 ಟಿ20 ತಂಡವಾದ ಇಂಗ್ಲೆಂಡ್ ವಿರುದ್ಧ ಸರಣಿ ಜಯಿಸಿದ ವಿಶ್ವಾಸದಲ್ಲಿರುವ ವಿಂಡೀಸ್, ಈಗಾಗಲೆ ಐಪಿಎಲ್ ನಲ್ಲಿ ವಿವಿಧ ತಂಡಗಳ ಪರ ಅವಕಾಶ ಪಡೆದಿರುವ ಟಿ20 ತಜ್ಞ ಆಟಗಾರರನ್ನು ಒಳಗೊಂಡಿದೆ. 2016ರಲ್ಲಿ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಮೈದಾನ ದಲ್ಲಿ ವಿಂಡೀಸ್, ಪ್ರಬಲ ಪೈಪೋಟಿ ಒಡ್ಡುವ ಲೆಕ್ಕಾಚಾರದಲ್ಲಿದೆ.
ಕಳೆದ 4 ವರ್ಷಗಳಿಂದ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದ ಯಜುವೇಂದ್ರ ಚಾಹಲ್‌ರನ್ನು ಕೈಬಿಟ್ಟು ವರುಣ್ ಚಕ್ರವರ್ತಿ, ರಾಹುಲ್ ಚಹರ್ ಮುಂತಾದ ಅನನುಭವಿ ಸ್ಪಿನ್ನರ್‌ಗಳೊಂದಿಗೆ ಆಡಿದ್ದ ಭಾರತ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಹೀಗಾಗಿ ಪ್ರಯೋಗಗಳಿಗೆ ಬದಲಾಗಿ, ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ಸಂಭಾವ್ಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ನಾಯಕ ರೋಹಿತ್ ಶರ್ಮ ಸ್ಪಷ್ಟಪಡಿಸಿದ್ದಾರೆ.
ರೋಹಿತ್ ಶರ್ಮ, ಪೂರ್ಣ ಪ್ರಮಾಣದಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ಅಲ್ಪ ಅವಧಿ ಯಲ್ಲೇ ಕೆಲ ಜಾಣ್ಮೆಯ ನಡೆಗಳಿಂದ ಗಮನಸೆಳೆದಿದ್ದಾರೆ.
ಭಾರತ ತಂಡ ಕೋಲ್ಕತದಲ್ಲಿ ಇದುವರೆಗೆ 4 ಟಿ20 ಪಂದ್ಯ ಆಡಿದ್ದು, 3ರಲ್ಲಿ ಗೆದ್ದಿದ್ದು, 1ರಲ್ಲಿ ಸೋತಿದೆ.
ಕನ್ನಡಿಗ ಕೆಎಲ್ ರಾಹುಲ್ ಗೈರಿನಲ್ಲಿ, ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮ ಜತೆಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಋತುರಾಜ್ ಗಾಯಕ್ವಾಡ್ ಅವಕಾಶಕ್ಕೆ ಇನ್ನಷ್ಟು ಕಾಯಬೇಕಾಗಬಹುದು. ಚಾಹಲ್ ಜತೆಗೆ ಎಡಗೈ ಸ್ಪಿನ್ನರ್ ಕುಲದೀಪ್ ಸ್ಪಿನ್ ವಿಭಾಗದ ಜವಾಬ್ದಾರಿ ಪಡೆಯ ಬಹುದು.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಸೂರ್ಯಕುಮಾರ್, ಶ್ರೇಯಸ್ ಅಯ್ಯರ್, ಹರ್ಷಲ್ ಪಟೇಲ್/ಶಾರ್ದೂಲ್, ಕುಲದೀಪ್/ರವಿ ಬಿಷ್ಣೋಯಿ, ಮೊಹಮದ್ ಸಿರಾಜ್, ಚಾಹಲ್, ಆವೇಶ್ ಖಾನ್.
ವೆಸ್ಟ್ ಇಂಡೀಸ್: ನಾಯಕ ಕೈರಾನ್ ಪೊಲ್ಲಾರ್ಡ್ ಟಿ20 ಸರಣಿಗೆ ಫಿಟ್ ಆಗುವ ನಿರೀಕ್ಷೆ ಇದೆ. ಜೇಸನ್ ಹೋಲ್ಡರ್, ಒಡೇನ್ ಸ್ಮಿತ್, ಅಕೀಲ್ ಹೊಸೀನ್ ಮುಂತಾದವರು ವಿಂಡೀಸ್ ಟಿ20 ತಂಡದ ಎಕ್ಸ್-ಫ್ಯಾಕ್ಟರ್ ಆಗಿದ್ದಾರೆ.
ಸಂಭಾವ್ಯ ತಂಡ: ಕೈಲ್ ಮೇಯರ್ಸ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್ (ವಿ.ಕೀ), ಕೈರಾನ್ ಪೊಲ್ಲಾರ್ಡ್ (ನಾಯಕ), ರೊವ್ಮನ್ ಪೊವೆಲ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಫ್ಯಾಬಿಯನ್ ಅಲೆನ್, ಒಡೇನ್ ಸ್ಮಿತ್, ಅಕೀಲ್ ಹೊಸೀನ್, ಶೆಲ್ಡನ್ ಕಾಟ್ರೆಲ್.
ಭಾರತ ಸೀಮಿತ ಓವರ್ ತಂಡದ ಉಪನಾಯಕ ಕೆಎಲ್ ರಾಹುಲ್ ಗಾಯದಿಂದಾಗಿ ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಹಂಗಾಮಿ ಉಪನಾಯಕರನ್ನಾಗಿ ಬಿಸಿಸಿಐ ನೇಮಿಸಿದೆ.