ಲಾರ್ಡ್ಸ್: ವೇಗಿ ಮೊಹಮದ್ ಸಿರಾಜ್ (21ಕ್ಕೆ 2) ಮಾರಕ ದಾಳಿ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯ ಪ್ರಯತ್ನ ದಲ್ಲಿದ್ದರೆ, ನಾಯಕ ಜೋ ರೂಟ್ (48*ರನ್) ಆಸರೆಯಲ್ಲಿ ಆತಿಥೇಯ ಇಂಗ್ಲೆಂಡ್ ಪ್ರತಿಹೋರಾಟ ಸಂಘಟಿಸಿದೆ.
ಇದಕ್ಕೂ ಮುನ್ನ, ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ 364 ರನ್ ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ವಿರಾಟ್ ಕೊಹ್ಲಿ 42, ರಿಷಬ್ ಪಂತ್ 37, ರವೀಂದ್ರ ಜಡೇಜಾ 40 ರನ್ ಬಾರಿಸಿದ್ದಾರೆ. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದು, 245 ರನ್ ಗಳ ಹಿನ್ನಡೆ ಅನುಭವಿಸಿದೆ.
ಆರಂಭಿಕ ಡೊಮಿನಿಕ್ ಸಿಬ್ಲೆ (11) ಹಾಗೂ ಹಸೀಬ್ ಹಮೀದ್‌ಗೆ (0) ಸಿರಾಜ್ ಒಂದೇ ಓವರ್‌ನಲ್ಲಿ ಪೆವಿಲಿಯನ್ ದಾರಿ ತೋರಿದರು. ಚಹಾ ವಿರಾಮದ ಬಳಿಕ ನಡೆದ ಮೊದಲ ಓವರ್‌ನಲ್ಲೇ ಸಿರಾಜ್ 2 ವಿಕೆಟ್ ಕಬಳಿಸಿ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಆತಿಥೇಯ ತಂಡಕ್ಕೆ ಆರಂಭಿಕ ರೋರಿ ಬರ್ನ್ಸ್ (49 ರನ್) ಹಾಗೂ ಜೋ ರೂಟ್ ಜೋಡಿ ಆಸರೆಯಾಯಿತು. ಕೇವಲ 23 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದ ವೇಳೆ ಜತೆಯಾದ ಈ ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ 3ನೇ ವಿಕೆಟ್‌ಗೆ 84 ರನ್ ಪೇರಿಸಿತು. ಆಗ ಬರ್ನ್ಸ್ ವಿಕೆಟ್ ಕಬಳಿಸಿದ ಶಮಿ, ಇಂಗ್ಲೆಂಡ್‌ಗೆ ಮತ್ತೊಂದು ಹೊಡೆತ ನೀಡಿದರು. ಕೊನೆಯಲ್ಲಿ ಜೋ ರೂಟ್ ಜತೆಗೆ ಜಾನಿ ಬೇರ್‌ಸ್ಟೋ (6*) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಲಾಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 276 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಭಾರತ ತಂಡ, ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ (62ಕ್ಕೆ 5) ಮಾರಕ ದಾಳಿಗೆ ನಲುಗಿ 364 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 45 ಓವರ್‌ಗಳಲ್ಲಿ 3 ವಿಕೆಟ್‌ಗೆ 119 ರನ್ ಪೇರಿಸಿದ್ದು, ಮುನ್ನಡೆಗೆ ಇನ್ನೂ 245 ರನ್ ಕಲೆ ಹಾಕಬೇಕಿದೆ.
ಆಂಡರ್‌ಸನ್ ಬ್ರೇಕ್: ಶುಕ್ರವಾರ ಬೆಳಗ್ಗೆ ಆಟ ಮುಂದುವರಿಸಿದ ಭಾರತ ತಂಡಕ್ಕೆ ವೇಗಿಗಳಾದ ಜೇಮ್ಸ್ ಆಂಡರ್‌ಸನ್ ಹಾಗೂ ಒಲಿ ರಾಬಿನ್‌ಸನ್ (73ಕ್ಕೆ 2) ಬ್ರೇಕ್ ಹಾಕಿದರು. ರಾಬಿನ್‌ಸನ್ ಎಸೆದ ದಿನದಾಟದ ಮೊದಲ ಓವರ್‌ನ ಮೊದಲ ಎಸೆತದಲ್ಲಿ 2 ರನ್ ಕಸಿಯುವ ಮೂಲಕ ಕೆಎಲ್ ರಾಹುಲ್ ಬಿರುಸಿನ ಆಟದ ಸೂಚನೆ ನೀಡಿದರು. ಆದರೆ, ಮರು ಎಸೆತದಲ್ಲೇ ಸಿಬ್ಲೆಗೆ ಕ್ಯಾಚ್ ನೀಡಿದರು. ಬೆನ್ನಲ್ಲೇ ಅಜಿಂಕ್ಯ ರಹಾನೆ (1) ಕೂಡ ಆಂಡರ್‌ಸನ್‌ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಜತೆಯಾದ ಎಡಗೈ ಬ್ಯಾಟ್ಸ್‌ಮನ್‌ಗಳಾದ ರಿಷಭ್ ಪಂತ್ (37ರನ್) ಹಾಗೂ ರವೀಂದ್ರ ಜಡೇಜಾ (40ರನ್) ಜೋಡಿ 6ನೇ ವಿಕೆಟ್‌ಗೆ 49 ರನ್ ಜತೆ ಯಾಟವಾಡಿ ತಂಡದ ಮೊತ್ತವನ್ನು 350ರ ಗಡಿಯತ್ತ ಸಾಗಿಸಿತು. ಬಳಿಕ ರವೀಂದ್ರ ಜಡೇಜಾ ಏಕಾಂಗಿ ನಿರ್ವಹಣೆ ತೋರಿದರು.