Friday, 13th December 2024

1000ನೇ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಮರಣೀಯ ಗೆಲುವು

ಅಹಮದಾಬಾದ್: ಮೊದಲ ಏಕದಿನ ಪಂದ್ಯ(1000ನೇ )ದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೀಮ್​ ಇಂಡಿಯಾ ಸುಲಭ ಗೆಲುವು ದಾಖಲಿಸಿದೆ.

ಬ್ಯಾಟಿಂಗ್​ ​​- ಬೌಲಿಂಗ್​​​ನಲ್ಲಿ ಆಲ್​​​ರೌಂಡ್​​ ಆಟವಾಡಿದ ರೋಹಿತ್​ ಪಡೆ, ಕೆರಿಬಿಯನ್ನರಿಗೆ ಸೋಲಿನ ರುಚಿ ತೋರಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಭಾರತ, ನಾಯಕನ ನಿರ್ಧಾರವನ್ನ ಸಮರ್ಥಿಸಿದ ಬೌಲರ್​​​ಗಳು, ಪ್ರವಾಸಿ ತಂಡ ಮೇಲೇಳದ ರೀತಿ ಆಘಾತ ನೀಡಿದರು. ಸಿರಾಜ್​​​​, ಸುಂದರ್ ಮತ್ತೊಂದೆಡೆ ಚಹಲ್​ ಕೂಡ ತನ್ನ ಸ್ಪಿನ್ ಮೋಡಿ ಮೂಲಕ ಮಿಡಲ್​​ ಆರ್ಡರ್​​​ ಕುಸಿತಕ್ಕೆ ಕಾರಣರಾದರು. ಪೂರನ್​​, ಪೊಲಾರ್ಡ್​​, ಬ್ರೂಕ್ಸ್​​​ಗೆ ಗೇಟ್​​ಪಾಸ್​ ನೀಡಲು ಯಶಸ್ವಿಯಾದರು.

ವಿಂಡೀಸ್ 79 ರನ್​ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಆಸರೆಯಾಗಿದ್ದು ಜೇಸನ್ ಹೋಲ್ಡರ್ ಮತ್ತು ಫ್ಯಾಬಿಯನ್ ಅಲೆನ್. ಹೋಲ್ಡರ್​​​​​ ಅರ್ಧಶತಕ, ಅಲೆನ್​​​ 29 ರನ್​ಗಳಿಸಿ 8ನೇ ವಿಕೆಟ್​​​​ಗೆ 78ರನ್​​ಗಳ ಕೊಡುಗೆ ನೀಡಿದರು. ಪರಿಣಾಮ ವಿಂಡೀಸ್​​​ 150ರ ಗಡಿ ದಾಟಲು ನೆರವಾಯ್ತು. ಆದರೆ, ಈ ಇಬ್ಬರ ಆಟಕ್ಕೆ ಪ್ರಸಿದ್ಧ್​​​​, ಸುಂದರ್​​​​​ ಬ್ರೇಕ್​ ಹಾಕಿದರು. ಅಂತಿಮವಾಗಿ ವಿಂಡೀಸ್​​​​​​, 177ಕ್ಕೆ ಸರ್ವಪತನ ಕುಸಿತ ಕಂಡಿತು. ಚಹಲ್​​ 4, ಸುಂದರ್​​ 3, ಪ್ರಸಿದ್ಧ್​​​ 2 ಮತ್ತು ಸಿರಾಜ್​ 1 ವಿಕೆಟ್​ ಪಡೆದು ಮಿಂಚಿದರು.

ವಿಂಡೀಸ್​ ನೀಡಿದ ಸುಲಭ ಗುರಿ ಬೆನ್ನತ್ತಿದ ಭಾರತ ತಂಡ, ಉತ್ತಮ ಆರಂಭವನ್ನೇ ಪಡೆಯಿತು. ಒಂದೆಡೆ ಇಶಾನ್​ ಕಿಶನ್​​​ ಎಚ್ಚರಿಕೆ ಆಟವಾಡುತ್ತಿದ್ದರೆ, ರೋಹಿತ್​​​ ಶರ್ಮಾ ವೇಗವಾಗೇ ಬ್ಯಾಟ್​​​​​ ಬೀಸಿ ತಮ್ಮ 44ನೇ ಅರ್ಧಶತಕವನ್ನ ಪೂರೈಸಿದರು. ಈ ಆರಂಭಿಕ ಜೋಡಿಯ ಅದ್ಭುತ ಆಟದಿಂದ ಮೊದಲ ವಿಕೆಟ್​​​​​ 84ರನ್​​ಗಳು ಹರಿದು ಬಂದವು. ಬಳಿಕ ಕೊಹ್ಲಿ ಕೂಡ ಎರಡು ಬೌಂಡರಿ ಸಿಡಿಸಿ ಅದೇ ಓವರ್​​​ನಲ್ಲಿ ಪೆವಿಲಿಯನ್​​ನತ್ತ ಹೆಜ್ಜೆ ಹಾಕಿದರು.

ರೋಹಿತ್​​-ಕೊಹ್ಲಿ ಔಟಾದ ಬೆನ್ನಲ್ಲೇ ಇಶಾನ್​ ಕಿಶನ್​ ಕೂಡ ಅದೇ ದಾರಿ ಹಿಡಿದರು. ರಿಷಭ್​ ಪಂತ್​ ತನ್ನದಲ್ಲದ ತಪ್ಪಿಗೆ ರನ್​​​ಔಟ್​ ಆಗಿ ನಿರ್ಗಮಿಸಿದರು. ಸೂರ್ಯಕುಮಾರ್​ ಮತ್ತು ಪದಾರ್ಪಣೆ ಮಾಡಿದ ದೀಪಕ್​ ಹೂಡಾ ಜವಾಬ್ದಾರಿಯುತ ಆಟದ ಮೂಲಕ ಅರ್ಧಶತಕದ ಜೊತೆಯಾಟವಾಡಿದರು.

ಸೂರ್ಯರ ಅಜೇಯ 34 ರನ್​​, ಹೂಡಾರ ಅಜೇಯ 26 ರನ್​​​ಗಳ ನೆರವಿನಿಂದ ಟೀಮ್​ ಇಂಡಿಯಾ 6 ವಿಕೆಟ್​​​ಗಳ ಗೆಲುವು ದಾಖಲಿಸಿತು.