ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯಲ್ಲಿ ಸೋತು, ನಿರಾಸೆಯಲ್ಲಿದ್ದ ಕೆ.ಎಲ್.ರಾಹುಲ್ ನಾಯಕತ್ವದ ಟೀಂ ಇಂಡಿಯಾ ಏಕದಿನ ಸರಣಿ ಪರೀಕ್ಷೆಯಲ್ಲಿ ಫೇಲಾಗಿದೆ.
ಎರಡೂ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಉತ್ತಮವಾದರೂ, ಬೌಲಿಂಗ್ ಸೊರಗಿತ್ತು. ವಿಕೆಟ್ ಕೀಳಲಾಗದೆ ಬೌಲರುಗಳು ತೀವ್ರ ಹತಾಶೆ ಅನುಭವಿಸಿ ದರು. ಅದರಲ್ಲೂ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ವಿಕೆಟ್ ಕೀಳಲಾಗದಿರುವುದು, ತಂಡದ ಪಾಲಿಗೆ ಹೇಳಲಾರದ ಹೊಡೆತ ನೀಡಿದ್ದಂತೂ ಸುಳ್ಳಲ್ಲ.
ಎರಡನೇ ಪಂದ್ಯದಲ್ಲಿ, ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದವರು, ನಾಯಕ ಕೆ.ಎಲ್. ರಾಹುಲ್ ಹಾಗೂ ಕೀಪರ್ ರಿಷಭ್ ಪಂತ್. ಇಬ್ಬರೂ ಅರ್ಧಶತಕ ಬಾರಿಸಿ, ಭಾರೀ ಮೊತ್ತ ಪೇರಿಸುವ ಸೂಚನೆ ಇತ್ತರು. ಮಧ್ಯಮ ಕ್ರಮಾಂಕದಲ್ಲಿ ಭಾರೀ ಜತೆಯಾಟ ಬರದಿದ್ದರೂ, ಕೊನೆ ಯಲ್ಲಿ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ರವಿಚಂದ್ರನ್ ಅಶ್ವಿನ್ ಉತ್ತಮ ಜತೆಯಾಟ ನೀಡಿ, ತಂಡ ಸವಾಲಿನ ಮೊತ್ತ ಏರಿಸುವಲ್ಲಿ ಸಫಲರಾದರು.
ಬಳಿಕ, ಬ್ಯಾಟಿಂಗ್ ಮಾಡಿದ, ಆತಿಥೇಯರಿಗೆ, ಭಾರತದ ಬೌಲಿಂಗ್ ಎದುರು, ಈ ಭಾರೀ ಮೊತ್ತವೂ ಸವಾಲೆನಿಸಲಿಲ್ಲ. ಕೀಪರ್ ಕ್ವಿಂಟನ್ ಡಿ’ಕಾಕ್ ಹೊಡೆಬಡಿಯ ಆಟಕ್ಕೆ ರನ್ ರೇಟ್ ಕೂಟ ರಾಕೆಟ್ ನಂತೆ ಮೇಲಕ್ಕೇರಿದ್ದು, ಕೆಳಗಿಳಿಯಲಿಲ್ಲ. ಆರಂಭಿಕರು ಮೊದಲ ಜತೆಯಾಟಕ್ಕೆ ಶತಕದ ಜತೆಯಾಟ ನೀಡಿದ್ದು, ಇಂದೇ ಸರಣಿ ಜಯದ ಖಾತ್ರಿ ಮಾಡಿದರು.
ಯಾವುದೇ ಹಂತದಲ್ಲೂ, ಭಾರತೀಯ ಬೌಲರುಗಳು ಘಾತಕ ಸ್ಪೆಲ್ ಪ್ರದರ್ಶಿಸಲಿಲ್ಲ. ಘಟಾನುಘಟಿ ಬೌಲರುಗಳೆಲ್ಲ ಧಾರಾಳ ರನ್ ತೆತ್ತು ಸುಸ್ತಾದರು. ಇನ್ನೂ ಹನ್ನೊಂದು ಎಸೆತ ಬಾಕಿ ಇರುವಾಗಲೇ, ಆಫ್ರಿಕಾ ತಂಡ ಪಂದ್ಯ ಗೆದ್ದು, ಸರಣಿ ವಶಪಡಿಸಿಕೊಂಡಿತು. ಟೀಂ ಇಂಡಿಯಾ ಪರ ವೇಗಿ ಬೂಮ್ರಾ, ಶಾರ್ದೂಲ್ ತಲಾ ಒಂದು ಹಾಗೂ ಸ್ಪಿನ್ನರ್ ಚಹಲ್ ಒಂದು ವಿಕೆಟ್ ಕಿತ್ತರು.