Thursday, 14th November 2024

Team India: ಸಿಕ್ಸರ್‌ ಮೂಲಕ ದಾಖಲೆ ಬರೆದ ಟೀಮ್‌ ಇಂಡಿಯಾ

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 13 ಸಿಕ್ಸರ್‌ ಬಾರಿಸಿದ ಟೀಮ್‌ ಇಂಡಿಯಾ(Team India) ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. 2024ರ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು ಮೂರು ಪಂದ್ಯಗಳಿಂದ ಭಾರತ ಸದ್ಯ 29 ಸಿಕ್ಸರ್‌ ಕಲೆಹಾಕಿದೆ.

ಭಾರತ ಇದುವರೆಗೆ ಈ ವರ್ಷದಲ್ಲಿ 25 ಟಿ20 ಪಂದ್ಯಗಳನ್ನಾಡಿ ಒಟ್ಟು 214 ಸಿಕ್ಸ್​ಗಳನ್ನು ಬಾರಿಸಿದೆ. ಭಾರತಕ್ಕೂ ಮುನ್ನ ಅತ್ಯಧಿಕ ಸಿಕ್ಸರ್‌ ಬಾರಿಸಿದ ದಾಖಲೆ ವೆಸ್ಟ್‌ ಇಂಡೀಸ್‌ ತಂಡದ ಹೆಸರಿನಲ್ಲಿತ್ತು. ವಿಂಡೀಸ್‌ 2024ರ ಸಾಲಿನಲ್ಲಿ ಸದ್ಯ 21 ಟಿ20 ಪಂದ್ಯಗಳನ್ನಾಡಿ ಒಟ್ಟು 201* ಸಿಕ್ಸರ್‌ ಸಿಡಿಸಿದೆ.​ ಈ ದಾಖಲೆಯನ್ನು ಭಾರತ ಮುರಿಯುವಲ್ಲಿ ಯಶಸ್ವಿಯಾಗಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವ ಕಾರಣ ಭಾರತದ ಸಿಕ್ಸರ್‌ಗಳ ಸಂಖ್ಯೆ ಇನ್ನಷ್ಟು ಏರಿಕೆ ಕಾಣಲಿದೆ. ಅತ್ತ ವಿಂಡೀಸ್‌ಗೂ ಇಂಗ್ಲೆಂಡ್‌ ವಿರುದ್ಧ ಮೂರು ಟಿ20 ಪಂದ್ಯಗಳು ನಿಗದಿಯಾಗಿದೆ. ಹೀಗಾಗಿ ವಿಂಡೀಸ್‌ಗೆ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಹೊರತುಪಡಿಸಿ ಈ ವರ್ಷ ಬೇರೆ ಯಾವುದೇ ತಂಡ ಟಿ20 ಕ್ರಿಕೆಟ್​ನಲ್ಲಿ 200+ ಸಿಕ್ಸ್ ಗಡಿ ದಾಟಿಲ್ಲ.

ಪಂದ್ಯ ಗೆದ್ದ ಭಾರತ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಿಲಕ್‌ ವರ್ಮ ಅವರ ಸ್ಫೋಟಕ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 219 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ ಅಂತಿಮವಾಗಿ 7 ವಿಕೆಟ್‌ಗೆ 208 ರನ್‌ ಬಾರಿಸಲಷ್ಟೇ ಶಕ್ತವಾಗಿ 11 ರನ್‌ ಅಂತರದಿಂದ ಸೋಲು ಕಂಡಿತು.

ಸಂಕ್ಷಿಪ್ತ ಸ್ಕೋರು: ಭಾರತ 6 ವಿಕೆಟಿಗೆ 219 (ಅಭಿಷೇಕ್‌ ಶರ್ಮ 50, ತಿಲಕ್‌ ವರ್ಮ 107 ಔಟಾಗದೆ, ಆಯಂಡಿಲ್‌ ಸಿಮೆಲೆನ್‌34ಕ್ಕೆ 2, ಕೇಶವ ಮಹಾರಾಜ್‌ 36ಕ್ಕೆ 2). ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 208 (ಕ್ಲಾಸೆನ್‌ 41, ಮಾರ್ಕೊ ಜಾನ್ಸೆನ್ 54, ಅರ್ಷದೀಪ್‌ ಸಿಂಗ್‌ 37 ಕ್ಕೆ 3, ವರಣ್‌ ಚರ್ಕವರ್ತಿ 54 ಕ್ಕೆ 2). ಪಂದ್ಯಶ್ರೇಷ್ಠ: ತಿಲಕ್‌ ವರ್ಮಾ.